ADVERTISEMENT

ಕುಮಟಾ: ಅಪಾಯ ಒಡ್ಡಿವೆ ಸವಕಲು ಸಲಕರಣೆ

ಕುಮಟಾದ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳಿಗೆ ಸಮಸ್ಯೆ

ಎಂ.ಜಿ.ನಾಯ್ಕ
Published 10 ಜೂನ್ 2022, 19:30 IST
Last Updated 10 ಜೂನ್ 2022, 19:30 IST
ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿರುವ ಪವರ್ ಲಿಫ್ಟಿಂಗ್ ಸ್ಟ್ಯಾಂಡ್
ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿರುವ ಪವರ್ ಲಿಫ್ಟಿಂಗ್ ಸ್ಟ್ಯಾಂಡ್   

ಕುಮಟಾ: ಇಲ್ಲಿ ನಿತ್ಯವೂ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಕಸರತ್ತು ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುತ್ತಾರೆ. ಆದರೆ, ಹೆಚ್ಚಿನ ಸಲಕರಣೆಗಳು ಸವಕಳಿಯಾಗಿ ವ್ಯಾಯಾಮ ಮಾಡುವವರ ಪ್ರಾಣಕ್ಕೇ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ.

ಪಟ್ಟಣದ ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿರುವ ಸಲಕರಣೆಗಳ ಸ್ಥಿತಿಯಿದು. ಸ್ಥಳೀಯ ಪುರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಈ ವ್ಯಾಯಾಮ ಶಾಲೆಗೆ, ತನ್ನದೇ ಆದ 15 ಗುಂಟೆ ಜಾಗ ಇದೆ. ಹೊಸ ಕಟ್ಟಡ ಕೂಡ ನಿಮಾಣವಾಗಿದ್ದು, ಇನ್ನೇನು ಸ್ಥಳಾಂತರ ಆಗಬೇಕಿದೆ. ಆದರೆ, ಸಲಕರಣೆಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ವ್ಯಾಯಾಮ ಮಾಡಲು ಅನನುಕೂಲವಾಗಿದೆ.

1955ರಲ್ಲಿ ಕುಮಟಾದ ಅಂದಿನ ದಾನಿ ಹಾಗೂ ಶಿಕ್ಷಣ ತಜ್ಞ ದಿವಂಗತ ಬಿ.ಎಂ.ಪೈ ಅವರು ವ್ಯಾಯಾಮ ಶಾಲೆಯ ಸ್ಥಾಪನೆಗೆ ಗಿಬ್ ವೃತ್ತದ ಬಳಿ ಪುರಸಭೆಗೆ 20 ಗುಂಟೆ ಜಾಗ ದೇಣಿಗೆ ನೀಡಿದ್ದರು. ಆದ್ದರಿಂದ ವ್ಯಾಯಾಮ ಶಾಲೆಗೆ ‘ಮುನ್ಸಿಪಲ್ ವ್ಯಾಯಾಮ ಶಾಲೆ’ ಎಂದು ಹೆಸರು ಬಂತು.

ADVERTISEMENT

ಎನ್.ಎಸ್. ಚಿತ್ರಿಗಿ ಎನ್ನುವವರು ವ್ಯಾಯಾಮ ಶಾಲೆಯ ಸಂಸ್ಥಾಪಕ ಶಿಕ್ಷಕರು. ಇದುವರೆಗೆ ಸಾವಿರಾರು ಜನ ಇಲ್ಲಿ ಅಭ್ಯಾಸ ಮಾಡಿ ವಿಶ್ವವಿದ್ಯಾಲಯ,ರಾಜ್ಯ, ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್, ವೇಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಈ ಬಾರಿ ‘ಏಷ್ಯನ್ ಗೇಮ್ಸ್’ಗೆ ಆಯ್ಕೆಯಾಗಿರುವ ವೆಂಕಟೇಶ ಪ್ರಭು ಇಲ್ಲಿಯ ವಿದ್ಯಾರ್ಥಿ.

‘ದಿನಕರ ಶೆಟ್ಟಿ ಅವರು ಹಿಂದೆ ಶಾಸಕರಾಗಿದ್ದಾದ ವ್ಯಾಯಾಮ ಶಾಲೆಗೆ ಚಾವಣಿ, ನೆಲಹಾಸು ಸೌಲಭ್ಯ ಕಲ್ಪಿಸಿದ್ದರು. ಪುರಸಭೆಯಿಂದ ಪೆಕ್ ಡೆಕ್ ಹಾಗೂ ಲೆಗ್ ಪ್ರೆಸ್ ಸಲಕರಣೆ ನೀಡಲಾಗಿದೆ. ವ್ಯಾಯಾಮ ಶಾಲೆಯಲ್ಲಿ ಪ್ರತೀ ವರ್ಷ ಚೌತಿ ಹಬ್ಬದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಆಗ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ನೀಡುವ ದೇಣಿಗೆ ಹಣದಿಂದ ವ್ಯಾಯಾಮ ಶಾಲೆಗೆ ಅಗತ್ಯವಿರುವ ಬೆಂಚ್ ಪ್ರೆಸ್, ಡಂಬಲ್ಸ್ ಹಾಗೂ ಪ್ಲೇಟ್‌ಗಳನ್ನು ಖರೀದಿಸಿದ್ದೇವೆ’ ಎನ್ನುತ್ತಾರೆ ವ್ಯಾಯಾಮ ಶಾಲೆಯ ಶಿಕ್ಷಕ ಗುರು ಉಪ್ಪಾರ.

‘₹ 5 ಲಕ್ಷ ಅಗತ್ಯ’:

ವ್ಯಾಯಾಮ ಶಾಲೆಯ ಪವರ್ ಲಿಫ್ಟಿಂಗ್ ಸ್ಟ್ಯಾಂಡ್ ಸವಕಳಿಯಾಗಿದೆ. ಪವರ್ ಲಿಫ್ಟರ್‌ಗಳು ಅದರ ಮೇಲೆ 200ರಿಂದ 300 ಕೆ.ಜಿ. ಭಾರವನ್ನು ಎತ್ತಿ ಇಡುತ್ತಾರೆ. ಅದೇನಾದರೂ ತುಂಡಾದರೆ ಭಾರದ ಪ್ಲೇಟ್‌ಗಳು ಮೈ ಮೇಲೆ ಬಿದ್ದು ಜೀವಕ್ಕೇ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ.

‘ಅವೇ ಸವಕಲು ಸಲಕರಣೆಗಳನ್ನು ಬಳಸಿ ಅಭ್ಯಾಸ ಮಾಡಿರುವ ವ್ಯಾಯಾಮ ಶಾಲೆಯ ವಿದ್ಯಾರ್ಥಿ ವೆಂಕಟೇಶ ಪ್ರಭು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಗತ್ಯ ಸಲಕರಣೆಗಳ ಖರೀದಿಗೆ ಕನಿಷ್ಠ ₹ 3ರಿಂದ ₹ 5 ಲಕ್ಷ ಅಗತ್ಯವಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಶಾಲೆಯ ಶಿಕ್ಷಕ ಗುರು ಉಪ್ಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.