ಕುಮಟಾ: ಪಟ್ಟಣದಲ್ಲಿರುವ ಉತ್ತರ ಕನ್ನಡ ರಕ್ತನಿಧಿ ಕೇಂದ್ರದಲ್ಲಿ ಪ್ಲೇಟ್‌ಲೆಟ್ ಬ್ಯಾಂಕ್ ಡೆಂಗಿ, ಇನ್ನಿತರ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ರೋಗಿಗಳಿಗೆ ವರವಾಗಿ ಪರಿಣಮಿಸಿದೆ.
ರಕ್ತಕಣಗಳ ಕೊರತೆಯಿಂದ ಬಳಲುವ ರೋಗಿಗಳನ್ನು ಚಿಕಿತ್ಸೆಗೆ ಹೊರಜಿಲ್ಲೆಯ ಆಸ್ಪತ್ರೆಗಳಿಗೆ ಕಳುಹಿಸುವ ಪ್ರಕರಣಗಳೇ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿತ್ತು. ಆದರೆ, ಪ್ಲೇಟ್‌ಲೆಟ್ ಬ್ಯಾಂಕ್ ಸೌಲಭ್ಯದಿಂದ ಇದು ತಕ್ಕಮಟ್ಟಿಗೆ ಕಡಿಮೆಯಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ನೂರಾರು ಜನರಿಗೆ ಈ ವ್ಯವಸ್ಥೆ ಅನುಕೂಲವಾಗಿದೆ ಎನ್ನುತ್ತಾರೆ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ.ಎಂ.ವಿ. ಮೂಡ್ಲಗಿರಿ.
‘ಡೆಂಗಿ ಜ್ವರ, ಆನುವಂಶೀಯವಾಗಿ ರಕ್ತದ ಕೊರತೆ ಸಮಸ್ಯೆ ( ಹಿಮೋಫಿಲಿಯಾ) ಹಾಗೂ ಆಂತರಿಕ ರಕ್ತ ಸ್ರಾವ ಉಂಟಾಗುವವರ ಆರೋಗ್ಯ ಸಹಜ ಸ್ಥಿತಿಗೆ ಬರಲು ರಕ್ತದ ಪ್ಲೇಟ್‌ಲೆಟ್ ಅಗತ್ಯವಿರುತ್ತದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಕುಮಟಾದಲ್ಲಿ ಮಾತ್ರ ಇರುವ ಈ ಸೌಲಭ್ಯ ಆರಂಭಕ್ಕೆ ಮುನ್ನ ಪ್ಲೇಟ್‌ಲೆಟ್ ಅಗತ್ಯವಿದ್ದವರನ್ನು ಉಡುಪಿ, ಮಂಗಳೂರು, ಗೋವಾ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿತ್ತು’ ಎಂದರು.
‘2022ರಲ್ಲಿ ಕುಮಟಾದಲ್ಲಿ ಪ್ಲೇಟ್‌ಲೆಟ್ ಬ್ಯಾಂಕ್ ತೆರೆಯಲಾಗಿದೆ. ಈವರೆಗೆ ಹೆಚ್ಚಿನ ಜನರಿಗೆ ಇಲ್ಲಿನ ಸೌಲಭ್ಯದ ಬಗ್ಗೆ ಅರಿವಿಗೆ ಬಂದಿರಲಿಲ್ಲ. ಈಚೆಗೆ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ’ ಎಂದರು.
‘ಹಲವು ಸಂಘಸಂಸ್ಥೆಗಳು, ದಾನಿಗಳ ದೇಣಿಗೆ ಮೊತ್ತ ಸೇರಿ ಸುಮಾರು ₹1 ಕೋಟಿಯಷ್ಟು ನೆರವು ಲಭಿಸಿತು. ಇದರಿಂದ ಪ್ಲೇಟ್‌ಲೆಟ್ ಬ್ಯಾಂಕ್ ಆರಂಭಿಸಲಾಯಿತು. ರಾಜ್ಯ ಔಷಧ ನಿಯಂತ್ರಣ ಮಂಡಳಿಯಿಂದ ಇದಕ್ಕೆ ವಿಶೇಷ ಅನುಮತಿ ಪಡೆಯಲಾಗಿದೆ’ ಎಂದು ವಿವರಿಸಿದರು.
‘ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಕಡಿಮೆ ದರದಲ್ಲಿ ಹಾಗೂ ಉಳಿದವರಿಗೆ ಪ್ಲೇಟ್‌ಲೆಟ್ 15-20 ಯುನಿಟ್‌ಗೆ ₹500 ಶುಲ್ಕ ಆಕರಿಸಲಾಗುತ್ತದೆ’ ಎಂದರು.
ಸರ್ಕಾರಿ ಆಸ್ಪತ್ರೆ ಸಮೀಪವೇ ಪ್ಲೇಟ್‌ಲೆಟ್ ಬ್ಯಾಂಕ್ ಇರುವುದರಿಂದ ಡೆಂಗಿ ಪೀಡಿತರ ಚಿಕಿತ್ಸೆಗೆ ತೀರಾ ಅನುಕೂಲಕರವಾಗಿದೆಡಾ.ಗಣೇಶ ನಾಯ್ಕ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ
ಬಡವರಿಗೆ ಉಚಿತ:
‘ರಕ್ತದಿಂದ ಪ್ರತ್ಯೇಕಿಸುವ ಪ್ಲೇಟ್‌ಲೆಟ್ ಅನ್ನು 0.80 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಟ್ಟು ಅಗತ್ಯವುಳ್ಳ ರೋಗಿಗಳಿಗೆ ನೀಡಲಾಗುತ್ತದೆ. ಅದನ್ನು ಸಂಗ್ರಹಿಸಿಟ್ಟು ಐದು ದಿನಗಳ ಒಳಗೆ ಬಳಕೆ ಮಾಡದಿದ್ದರೆ ಅದು ವ್ಯರ್ಥವಾಗುತ್ತದೆ. ಪ್ಲೇಟ್‌ಲೆಟ್ ಜೊತೆ ಬೇರೆ ಬೇರೆ ಚಿಕಿತ್ಸೆಗೆ ಬೇಕಾಗುವ ಕೆಂಪು ರಕ್ತಕಣ ಹಾಗೂ ಫ್ರೆಶ್ ಫ್ರೋಜನ್ ಪ್ಲಾಸ್ಮಾ (ಎಫ್.ಎಫ್.ಪಿ) ಸಹ ಸಂಗ್ರಹಿಸಿಡಲಾಗುತ್ತಿದೆ. ಎಚ್.ವಿ ತಲಸೇಮಿಯಾ ಪೀಡಿತರಿಗೆ ಹಾಗೂ ಕಡುಬಡವರಿಗೆ ಇವುಗಳನ್ನು ಉಚಿತವಾಗಿ ನೀಡಲಾಗುತ್ತದೆ’ ಎಂದು ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ.ಎಂ.ವಿ.ಮೂಡ್ಲಗಿರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.