ADVERTISEMENT

ಕಿರು ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಕೊರತೆ: ನಬಾರ್ಡ್ ಎಸ್.ಎಲ್.ಯೋಗೀಶ

ಹಣಕಾಸು ನಿರ್ವಹಣೆಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:23 IST
Last Updated 23 ಅಕ್ಟೋಬರ್ 2018, 11:23 IST
ಕಾರವಾರದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಾಗಾರದಲ್ಲಿ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಕಾರವಾರದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಾಗಾರದಲ್ಲಿ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು   

ಕಾರವಾರ:‘ಕಿರು ಹಣಕಾಸು ವ್ಯವಹಾರ ಮಾಡುವ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿದೆ. ಇದರಿಂದ ಪೊಲೀಸರು, ಅಧಿಕಾರಿಗಳುಒಳಗೊಂಡಂತೆ ಹಲವರುಅನುಮಾನದಿಂದ ನೋಡುವಂತಾಗಿದೆ’ ಎಂದು ನಬಾರ್ಡ್‌ನ ಜಿಲ್ಲಾ ಉಪ ವ್ಯವಸ್ಥಾಪಕ ಎಸ್.ಎಲ್.ಯೋಗೀಶ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಕಿರು ಹಣಕಾಸು ವ್ಯವಹಾರ ಮಾಡುತ್ತಿರುವ ಪಾಲುದಾರರಿಗೆ ಹಣಕಾಸು ನಿರ್ವಹಣೆಯ ಕಾರ್ಯಾಗಾರ ಮತ್ತು ಗ್ರಾಹಕರ ಕುಂದು ಕೊರತೆಗಳ, ದೂರು ನಿವಾರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಿರು ಹಣಕಾಸು ವ್ಯವಹಾರ ಸಂಸ್ಥೆಗಳು ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ದರ ವಿಧಿಸುತ್ತವೆ ಎಂಬ ಆರೋಪವಿದೆ. ಆದರೆ, ಈ ಸಂಸ್ಥೆಗಳಿಗೆ ಹಣಕಾಸಿನ ಬೇರೆ ಯಾವುದೇ ಮೂಲಗಳಿಲ್ಲ. ಕೆಲವೊಂದು ಬೋಗಸ್ ಸಂಸ್ಥೆಗಳಿಂದಾಗಿಕಾನೂನು ಪ್ರಕಾರ ವ್ಯವಹಾರ ಮಾಡುವವರನ್ನೂ ಅನುಮಾನದಿಂದಲೇ ನೋಡಲಾಗುತ್ತಿದೆ.ಈ ಬಗ್ಗೆ ಸೂಕ್ತ ಮಾಹಿತಿ ರವಾನೆಯಾದರೆ ವ್ಯತ್ಯಾಸಅರಿವಿಗೆ ಬರುತ್ತದೆ’ ಎಂದು ಹೇಳಿದರು.

ADVERTISEMENT

ಲೀಡ್ ಬ್ಯಾಂಕ್ ವ್ಯವಸ್ಥಾ‍ಪಕ ಪಿ.ಎಂ.ಪಿಂಜರ್ ಮಾತನಾಡಿ, ‘ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 345 ಶಾಖೆಗಳಿವೆ. ಆದರೆ, ಅವುಗಳು ಕಿರು ಹಣಕಾಸು ವ್ಯವಹಾರ ಸಂಸ್ಥೆಗಳ ರೀತಿಯಲ್ಲಿ ಮನೆ ಬಾಗಿಲಿಗೇ ಸೇವೆ ನೀಡಲಾಗುತ್ತಿಲ್ಲ. ಈ ಮಟ್ಟಿಗೆ ಬ್ಯಾಂಕ್‌ಗಳಿಗೆ ಅವು ಸ್ಪರ್ಧೆ ಒಡ್ಡುತ್ತಿರುವುದು ಶ್ಲಾಘನೀಯ. ಸ್ಪರ್ಧಾ ಮನೋಭಾವದಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ’ ಎಂದು ಮೆಚ್ಚುಗೆ ಸೂಚಿಸಿದರು.

ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ (ಎಕೆಎಂಐ) ಲೋಕಪಾಲ ಬಿ.ಎಂ.ಪಾಮಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಎಕೆಎಂಐ 2007ರಲ್ಲಿ ಸ್ಥಾಪನೆಯಾಯಿತು. ರಾಜ್ಯದಾದ್ಯಂತ 28 ಸದಸ್ಯ ಸಂಸ್ಥೆಗಳಲ್ಲಿ 81 ಲಕ್ಷ ಸಾಲದ ಖಾತೆಗಳಿವೆ. ಕಳೆದ ಹಣಕಾಸು ವರ್ಷದಲ್ಲಿ ₹ 19 ಕೋಟಿ ಸಾಲ ವಿತರಣೆ ಮಾಡಲಾಗಿದೆ. ವಿವಿಧ ಸಂಸ್ಥೆಗಳಲ್ಲಿ ಒಟ್ಟು22 ಸಾವಿರ ನೌಕರರಿದ್ದಾರೆ’ ಎಂದು ಅಂಕಿ ಅಂಶ ನೀಡಿದರು.

ದೂರು ದುಮ್ಮಾನಕ್ಕೆ ಲೋಕಪಾಲರು: ಕಿರು ಹಣಕಾಸುವ್ಯವಹಾರ ಸಂಸ್ಥೆಗಳಿಗೆ ಸಂಬಂಧಿಸಿ ಲೋಕಪಾಲರ ವಿಭಾಗವಿದ್ದು, ಗ್ರಾಹಕರ ದೂರುಗಳನ್ನು ವಿಚಾರಣೆ ಮಾಡುತ್ತಾರೆ. ಸಿಬ್ಬಂದಿ ನಡವಳಿಕೆ, ಹೆಚ್ಚಿನ ಬಡ್ಡಿ ಆಕರಣೆ, ಸಾಲ ವಿತರಣೆಯಲ್ಲಿ ವಿಳಂಬ ಅಥವಾ ನಿರಾಕರಣೆ, ವಿಮೆ ಸೌಲಭ್ಯದ ಕುರಿತು ಅವರು ಗಮನ ಹರಿಸುತ್ತಾರೆ ಎಂದು ಬಿ.ಎಂ.ಪಾಮಡಿ ತಿಳಿಸಿದರು.

ಈ ಸಂಬಂಧ ಗ್ರಾಹಕರು ಮೊಬೈಲ್: 96064 88754 (ಕಾರವಾರ), ಟೋಲ್ ಫ್ರೀ ಸಂಖ್ಯೆ: 1800 425 5654 (ಬೆಂಗಳೂರು) ಸಂಪರ್ಕಿಸಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನಿರ್ದೇಶಕ ಶಂಕರ ಶೆಟ್ಟಿ, ಸಿಂಡ್ ಆರ್ ಸೆಟಿ ನಿರ್ದೇಶಕ ಎ.ಟಿ.ನವೀನ ಕುಮಾರ,ಎಕೆಎಂಐ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಎನ್.ಹೆಗಡೆ, ಹಿರಿಯ ಸಮಾಲೋಚಕಿ ಮಟಿಲ್ಡಾ ಸೋಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.