ADVERTISEMENT

ಕಾರವಾರ: ಕೆ.ಟಿ.ಆರ್ ಯೋಜನೆಗಾಗಿ ಜಮೀನು ತೆರವು; ಪರಿಹಾರಕ್ಕೆ ಭೂ ಮಾಲೀಕರ ಅಲೆದಾಟ

ಕೆ.ಟಿ.ಆರ್ ವ್ಯಾಪ್ತಿಯ ಬೀರಖೋಲ, ಕೊಡಸಳ್ಳಿ, ಬಿಡೋಲಿ ಗ್ರಾಮಗಳ ಹತ್ತಾರು ಕುಟುಂಬಗಳು

ಸದಾಶಿವ ಎಂ.ಎಸ್‌.
Published 4 ಫೆಬ್ರುವರಿ 2022, 19:31 IST
Last Updated 4 ಫೆಬ್ರುವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಕಾಳಿ ಹುಲಿ ಸಂರಕ್ಷಿತ ವಲಯ ಯೋಜನೆಯು (ಕೆ.ಟಿ.ಆರ್) ಜಾರಿಯಾಗಿ ಮೂರು ದಶಕಗಳು ಕಳೆದಿವೆ. ಆದರೆ, ಯೋಜನೆಗಾಗಿ ಜಮೀನು ತೆರವು ಮಾಡಿದ ಹಲವು ಕುಟುಂಬಗಳು ಪರಿಹಾರಕ್ಕಾಗಿ ಇಂದಿಗೂ ಅಲೆದಾಡುತ್ತಿವೆ. ಕೆ.ಟಿ.ಆರ್. ವ್ಯಾಪ್ತಿಯಲ್ಲೇ ಕೃಷಿ ಭೂಮಿಯಿದ್ದರೂ ಅದನ್ನು ಸರಿಯಾಗಿ ಸಾಗುವಳಿ ಮಾಡಲಾಗದೇ ಪರಿತಪಿಸುತ್ತಿವೆ.

ಜೊಯಿಡಾ ತಾಲ್ಲೂಕಿನ ಬೀರಖೋಲ ಗ್ರಾಮದ ಸುಳಗೇರಿ ಮಜಿರೆ, ಕೊಡಸಳ್ಳಿ, ಬಿಡೋಲಿ ಗ್ರಾಮಗಳ 15ಕ್ಕೂ ಅಧಿಕ ಕೃಷಿಕ ಕುಟುಂಬಗಳು ಇಂದಿಗೂ ಸರ್ಕಾರದಿಂದ ಪರಿಹಾರ ಸಿಗುವ ಬಗ್ಗೆ ಆಶಾಭಾವದಲ್ಲಿವೆ. ಕೆ.ಟಿ.ಆರ್ ಸಲುವಾಗಿ 2008ರಲ್ಲಿ ಈ ಭಾಗದ ಕೃಷಿಕರು ವಾಸ್ತವ್ಯ ಬದಲಿಸಿದರು. ಕೆಲವರು ಯಲ್ಲಾಪುರ ತಾಲ್ಲೂಕಿನ ಕಳಚೆ, ಕಲ್ಲೇಶ್ವರ, ಯಲ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸ್ಥಳಾಂತರವಾದರು. ಆದರೆ, ಕೆ.ಟಿ.ಆರ್ ವ್ಯಾಪ್ತಿಯಲ್ಲಿದ್ದ ಕೃಷಿ ಜಮೀನು ಅವರ ಹೆಸರಿನಲ್ಲೇ ಮುಂದುವರಿದವು.

ಕಾರ್ಮಿಕರಿಗೆ ಸಿಕ್ಕಿದ ಪರಿಹಾರ:‘ನಾವು ಯೋಜನೆಗಾಗಿ ಗ್ರಾಮಗಳನ್ನು ತೊರೆದಾಗ ನಮ್ಮ ಕೃಷಿ ಜಮೀನಿನಲ್ಲಿ ಕಾರ್ಮಿಕರಾಗಿದ್ದವರೂ ಸ್ಥಳಾಂತರಗೊಂಡರು. ಅವರಿಗೆ ಸರ್ಕಾರದಿಂದ ಪರಿಹಾರ ವಿತರಿಸಲಾಯಿತು. ಜೊತೆಗೇ ನಮ್ಮ ಜಮೀನಿನಲ್ಲಿ ಬಾಡಿಗೆ ಗೇಣಿ ಮಾಡುತ್ತಿದ್ದವರಿಗೂ ಪರಿಹಾರ ಸಿಕ್ಕಿತು. ಆದರೆ, ಕೆ.ಟಿ.ಆರ್ ಯೋಜನೆ ಘೋಷಣೆಗೂ ಸಾಕಷ್ಟು ಮೊದಲಿನಿಂದಲೂ ಅಲ್ಲಿ ವಾಸ ಮಾಡುತ್ತಿದ್ದ ಜಮೀನು ಮಾಲೀಕರಿಗೆ ಸಿಗಲಿಲ್ಲ’ ಎಂದು ಕಲ್ಲೇಶ್ವರದ ನಾರಾಯಣ ಹೆಗಡೆ ಬೇಸರಿಸುತ್ತಾರೆ.

ADVERTISEMENT

‘ನಮಗೂ ಪರಿಹಾರ ಕೊಡಿ ಎಂದು ಅರಣ್ಯ ಇಲಾಖೆಯವರನ್ನು ಕೇಳಿದರೆ, ನೀವು ಈಗಾಗಲೇ ಬೇರೆ ಕಡೆಗೆ ಸ್ಥಳಾಂತರವಾಗಿದ್ದೀರಿ. ಪರಿಹಾರ ಕೊಡುವುದು, ಜನರನ್ನು ತೆರವು ಮಾಡುವ ಉದ್ದೇಶಕ್ಕಾಗಿತ್ತು. ಹಾಗಾಗಿ ಕಾರ್ಮಿಕರಿಗೆ ನೀಡಿದಂತೆ ನಿಮಗೂ ಪರಿಹಾರ ನೀಡುವುದನ್ನು ಪರಿಗಣಿಸಲಾಗದು ಎಂದು ಹೇಳುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ನಮ್ಮ ಜಮೀನಿನ ಸುತ್ತಲೂ ದಟ್ಟವಾದ ಕಾಡು ಬೆಳೆದಿದೆ. ಈ ಭಾಗದಲ್ಲಿ ವನ್ಯ ಜೀವಿಗಳ ಸಂಖ್ಯೆಯೂ ಹೆಚ್ಚಿದ್ದು, ಗದ್ದೆ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನಿಗೆ ಸೂಕ್ತ ರಸ್ತೆ ಸಂಪರ್ಕವೂ ಇಲ್ಲ. ಹಾಗಾಗಿ ಸಾಗುವಳಿ ಮಾಡಲು ಸಾಧ್ಯವಾಗುತ್ತಿಲ್ಲ. ಫಲವತ್ತಾದ ಭೂಮಿ ಪಾಳುಬಿದ್ದಿದೆ. ಕೇವಲ ದಾಖಲೆಯಲ್ಲಿ ಜಮೀನು ಇದ್ದರೆ ಏನುಪಯೋಗ ಬಂತು? ಪರಿಹಾರದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದರು.

‘ನ್ಯಾಯಾಲಯದಲ್ಲಿ ಪ್ರಯತ್ನಿಸುತ್ತೇವೆ’:‘ಕೆ.ಟಿ.ಆರ್ ವ್ಯಾಪ್ತಿಯಲ್ಲಿರುವ ನಮ್ಮ ಜಮೀನನ್ನು ಸಮೀಕ್ಷೆ ಮಾಡಿ. ಅಲ್ಲಿನ ಸ್ಥಿತಿಗತಿಗಳ ಬಗ್ಗೆ ನೈಜ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಪ್ರಸ್ತುತ ಪಡಿಸಿ. ಅರಣ್ಯ ಇಲಾಖೆಯ ಅಧಿಕಾರಿಗಳೂ ಅದರಲ್ಲಿದ್ದಾರೆ. ಸಮಿತಿಗೆ ಸಮಸ್ಯೆಯ ಮನವರಿಕೆಯಾದರೆ ಪರಿಹಾರಧನ ಮಂಜೂರು ಮಾಡಲಿ. ಇಲ್ಲದಿದ್ದರೆ ಪರಿಹಾರ ನೀಡಲಾಗದು ಎಂದು ಕಾರಣ ಸಹಿತ ಲಿಖಿತವಾಗಿ ತಿಳಿಸಿ. ಅದನ್ನು ಆಧರಿಸಿ, ಕೊನೆಯ ಪ್ರಯತ್ನವಾಗಿ ನ್ಯಾಯಾಲಯದಲ್ಲಾದರೂ ಹೋರಾಡುತ್ತೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಅದಕ್ಕೂ ಯಾವುದೇ ಸ್ಪಂದನೆಯಿಲ್ಲ’ ಎಂದು ನಾರಾಯಣ ಹೆಗಡೆ ಆರೋಪಿಸುತ್ತಾರೆ.

-----

ಕೃಷಿ ಜಮೀನು ಮಾಲೀಕರಿಗೂ ಪರಿಹಾರ ವಿತರಣೆಯ ಬಗ್ಗೆ ಪರಿಶೀಲಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ.
-ಜಯಲಕ್ಷ್ಮಿ ರಾಯಕೊಡ, ಉಪ ವಿಭಾಗಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.