ADVERTISEMENT

ಜೋಗದ ಬ್ರಿಟಿಷ್ ಬಂಗಲೆ ಸಮೀಪ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 12:32 IST
Last Updated 9 ಆಗಸ್ಟ್ 2019, 12:32 IST
ಅಂಕೋಲಾ ತಾಲ್ಲೂಕಿನ ಸುಂಕಸಾಳ ಹೈಲ್ಯಾಂಡ್ ಹೋಟೆಲ್ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಲಾರಿ ಚಾಲಕರನ್ನು ಪೊಲೀಸರು ಶುಕ್ರವಾರ ರಕ್ಷಿಸಿದರು
ಅಂಕೋಲಾ ತಾಲ್ಲೂಕಿನ ಸುಂಕಸಾಳ ಹೈಲ್ಯಾಂಡ್ ಹೋಟೆಲ್ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಲಾರಿ ಚಾಲಕರನ್ನು ಪೊಲೀಸರು ಶುಕ್ರವಾರ ರಕ್ಷಿಸಿದರು   

ಕಾರವಾರ: ಜಿಲ್ಲೆಯ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.ಅಂಕೋಲಾ ತಾಲ್ಲೂಕಿನ ಹಲವು ಗ್ರಾಮಗಳು, ಕಾರವಾರ ತಾಲ್ಲೂಕಿನ ಕದ್ರಾ, ಮಲ್ಲಾಪುರ ಸುತ್ತಮುತ್ತ ನೆರೆ ನೀರು ಮತ್ತಷ್ಟು ಹೆಚ್ಚಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ.

ಜೋಗ ಜಲಪಾತದಲ್ಲಿಬ್ರಿಟಿಷ್ ಬಂಗಲೆಯ ಸಮೀಪ ಶುಕ್ರವಾರಮಣ್ಣು ಕುಸಿದಿದೆ. ಇಲ್ಲಿನ ವೀಕ್ಷಣಾ ಗ್ಯಾಲರಿಯ ಕೊನೆಯ ಸ್ಥಳದಲ್ಲಿ ಘಟನೆ ನಡೆದಿದ್ದು, ಈ ಜಾಗವುಸಿದ್ದಾಪುರ ತಾಲ್ಲೂಕಿನಲ್ಲಿದೆ. ಬಂಗಲೆಗೆಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ವಿ.ಜನ್ನು ಹೇಳಿದ್ದಾರೆ.

ಅಂಕೋಲಾ ತಾಲ್ಲೂಕಿನ ಸುಂಕಸಾಳದಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಸಿಲುಕಿರುವ ಹತ್ತಾರು ಗ್ರಾಮಗಳಲ್ಲಿ ಜನರ ರಕ್ಷಣೆಗೆನೌಕಾಪಡೆಯ ಹೆಲಿಕಾಪ್ಟರ್ ಬಳಕೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದ ರದ್ದುಮಾಡಲಾಯಿತು. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತಂಡವೊಂದು ಶುಕ್ರವಾರ ರಾತ್ರಿ ಜಿಲ್ಲೆಗೆ ತಲುಪಲಿದೆ.

ADVERTISEMENT

ಇದಕ್ಕೂ ಮೊದಲು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಸುಂಕಸಾಳದ ಹೈಲ್ಯಾಂಡ್ ಹೋಟೆಲ್ ಬಳಿರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 200 ಮಂದಿ ಲಾರಿ ಚಾಲಕರು ಮತ್ತು 50 ಮಂದಿ ಸಾರ್ವಜನಿಕರನ್ನು ಸುರಕ್ಷಿತವಾಗಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಬಂದರು. ಇಲ್ಲಿನ ಹಲವು ಹಳ್ಳಿಗಳಲ್ಲಿ ಪ್ರವಾಹದಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಆದ್ದರಿಂದಸಂತ್ರಸ್ತರನ್ನು ಗುರುತಿಸಿ ಕರೆದುಕೊಂಡು ಬರುವುದೂ ದೊಡ್ಡ ಸವಾಲಾಗಿದೆ.

ಇದೇ ತಾಲ್ಲೂಕಿನ ರಾಮನಗುಳಿ– ಕಲ್ಲೇಶ್ವರ ಸಂಪರ್ಕಿಸುವ ತೂಗುಸೇತುವೆ ಗುರುವಾರ ರಾತ್ರಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಇತ್ತ ಕಾರವಾರ ತಾಲ್ಲೂಕಿನವಿವಿಧೆಡೆ ಕಾಳಿ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ ಮುಂದುವರಿದಿದ್ದು, ಜನರು ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಳಿದಂತೆ, ಶಿರಸಿ, ಸಿದ್ದಾಪುರ, ಹಳಿಯಾಳ, ಯಲ್ಲಾಪುರ, ಮುಂಡಗೋಡ, ಜೊಯಿಡಾ ತಾಲ್ಲೂಕುಗಳಲ್ಲಿ ದಿನವಿಡೀ ಜೋರಾಗಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.