ಶಿರಸಿ ತಾಲ್ಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಪಣೆ ಕಾರ್ಯಕ್ರಮವನ್ನು ಶಿವರಾಮ ಹೆಬ್ಬಾರ ಉದ್ಘಾಟಿಸಿದರು
ಶಿರಸಿ: ‘ಸಮಾಜದ ಕಟ್ಟಕಡೆಯ ವ್ಯಕ್ತಿ ತಮ್ಮ ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಆಗಮಿಸುತ್ತಾನೆ. ಅಂಥವರಿಗೂ ಉತ್ತಮ ಸೇವೆ ದೊರೆಯುವ ನಿಟ್ಟಿನಲ್ಲಿ ಸರ್ಕಾರವು ಸ್ಥಳೀಯ ಆಡಳಿತವನ್ನು ಬಲಗೊಳಿಸುವ ಕೆಲಸ ಮಾಡುತ್ತಿದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಉಂಚಳ್ಳಿಯಲ್ಲಿ 15ನೇ ಹಣಕಾಸು ಹಾಗೂ ನರೇಗಾ ಯೋಜನೆಗಳ ಅಡಿಯಲ್ಲಿ ₹53.35 ಲಕ್ಷ ವೆಚ್ಚದಲ್ಲಿ ಮಂಜೂರಾದ ಉಂಚಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಕ್ಷೇತ್ರದ ಸರ್ವಾಂಗೀಣ ಪ್ರಗತಿ ನನ್ನ ಮುಖ್ಯ ಗುರಿಯಾಗಿದೆ. ಉಂಚಳ್ಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ₹55 ಕೋಟಿ ನನ್ನ ಅವಧಿಯಲ್ಲಿ ನೀಡಿದ್ದೇನೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿದ್ದು, ಅದಕ್ಕೂ ಕಾಯಕಲ್ಪ ನೀಡಲು ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ಬಡವರಿಗೆ ತೊಂದರೆಯಾಗಬಾರದು’ ಎಂದರು.
‘ರಾಜ್ಯ ಸರ್ಕಾರವು ಪಂಚ ಗ್ಯಾರೆಂಟಿಗೆ ₹56 ಸಾವಿರ ಕೋಟಿ ನೀಡುತ್ತಿದೆ. ಕುಟುಂಬದ ಗೌರವ ಹೆಚ್ಚಿಗೆ ಮಾಡುವ ಮಹಿಳೆಯರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಸಾರ್ವಜನಿಕ ಕೆಲಸದ ಜತೆ ವೈಯಕ್ತಿಕ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ’ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಇಂಡಿಯಾ ಬುಕ್ ಆಫ್ ಅವಾರ್ಡ್ ಪಡೆದ ಪೂಜಾ ನಾಯ್ಕ ಸೋಮನಹಳ್ಳಿ, ಗ್ರಾಮ ಪಂಚಾಯಿತಿ ಕಟ್ಟಡ ಗುತ್ತಿಗೆದಾರ ಚಂದ್ರಕಾಂತ ಗೌಡ, ಹಾಲಿ ಸದಸ್ಯರು, ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು.ಉಂಚಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ ಭೋವಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ನಾಗರಾಜ ಮುರ್ಡೇಶ್ವರ, ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ, ಉಂಚಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವೇಂದ್ರ ನಾಯ್ಕ, ರವಿತೇಜ ರೆಡ್ಡಿ, ಅರುಣ ನಾಯ್ಕ, ನೇತ್ರಾವತಿ ಮಡಿವಾಳ, ಸುಜಾತ ಚನ್ನಯ್ಯ, ಮಾಲತಿ ನಾಯ್ಕ, ಫಾಮಿದಾ ಬೇಗಂ, ದೇವೇಂದ್ರ ನಾಯ್ಕ, ಹುಲಿಯಾ ಗೌಡ ಇತರರಿದ್ದರು. ಪಿಡಿಒ ಆಶಾ ಗೌಡ ಸ್ವಾಗತಿಸಿದರು. ಕುಮಾರ ವಾಸನ್ ನಿರೂಪಿಸಿದರು.
‘ಸಮಾಜದಲ್ಲಿ ವೈಶಾಲ್ಯ ಬರುವುದು ಹೇಗೆ’
ಶಿರಸಿ: ‘ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದಾಗ ಸಂಭ್ರಮಿಸಿದವರು ಲೇಖಕಿ ಭಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದಾದರೆ ಖಂಡಿಸುವುದು ಏಕೆ? ಇಂಥ ಬೆಳವಣಿಗೆಗಳು ಚಾಲ್ತಿಯಲ್ಲಿದ್ದರೆ, ಸಮಾಜದಲ್ಲಿ ವೈಶಾಲ್ಯತೆ ಬರುವುದು ಹೇಗೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಪ್ರಶ್ನಿಸಿದರು.
‘ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಹಿಂದೆ ದಸರಾ ಉದ್ಘಾಟಿಸಲಿಲ್ಲವೇ? ನಾಡ ದೇವತೆ ಪೂಜೆಗೆ ಜಾತಿ, ಧರ್ಮ ಮಾಡಬಾರದು. ಜಾತ್ಯಾತೀತ ದೇಶದಲ್ಲಿ ಇದನ್ನೆಲ್ಲ ಇಟ್ಟುಕೊಳ್ಳಬಾರದು. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆದಾಗ ಹೆಮ್ಮೆ ಪಡಲಿಲ್ಲವೇ? ಈಗಲೂ ಹಾಗೆಯೇ ಸಂತಸ ಪಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಕನ್ನಡಕ್ಕೆ ಬುಕರ್ ಪ್ರಶಸ್ತಿ ಬಂದಿದೆ. ಕನ್ನಡದ ಗೌರವ ಹೆಚ್ಚಿಸಿರುವ ಭಾನು ಅವರಿಗೆ ಉದ್ಘಾಟನೆಗೆ ಅವಕಾಶ ಸಿಕ್ಕಿದೆ. ಅದಕ್ಕೆ ಅಪಚಾರ ಯಾಕೆ ಮಾಡಬೇಕು? ವಿವಾದದಿಂದ ಏನಾಗುತ್ತದೆ. ಧರ್ಮ ಯಾವ ಪಕ್ಷದ ಗುತ್ತಿಗೆ ಅಲ್ಲ. ಡಿಕೆಶಿ ಅವರು ಮಠ, ಮಂದಿರಕ್ಕೆ ಹೋಗುತ್ತಾರೆ. ಹೀಗಾಗಿ ಯಾರೋ ಕೆಲವರಿಗೆ ಧರ್ಮ ಗುತ್ತಿಗೆಯಲ್ಲ’ ಎಂದರು.
‘ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ದೇವರ ಅವಕೃಪೆಗೆ ಒಳಗಾದರೆ ಯಾರೂ ತಪ್ಪಿಸಿಕೊಳ್ಳಲು ಆಗದು. ಧರ್ಮಸ್ಥಳ ತನಿಖೆ ಮುಗಿಯುವವರೆಗೆ ವಾಸ್ತವಿಕತೆ ಅರ್ಥ ಆಗುವುದಿಲ್ಲ. ಆರೋಪ ಮಾಡುವ ಗಿರೀಶ ಮಟ್ಟೆಣ್ಣವರ, ಮಹೇಶ ತಿಮರೋಡಿ ಅವರೆಲ್ಲ ಎಲ್ಲಿದ್ದರು ಎಂಬುದು ಎಲ್ಲರಿಗೂ ಗೊತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.