ADVERTISEMENT

ಹೆದ್ದಾರಿಗೆ ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹ

ಚತುಷ್ಪಥ ರಸ್ತೆ ಕಾಮಗಾರಿ ಅವೈಜ್ಞಾನಿಕ ಆರೋಪ: ಅವರ್ಸಾದಲ್ಲಿ ಸ್ಥಳೀಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:21 IST
Last Updated 13 ಫೆಬ್ರುವರಿ 2019, 14:21 IST
ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಅಂಡರ್‌ಪಾಸ್ ಮತ್ತು ಸರ್ವೀಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಅಂಡರ್‌ಪಾಸ್ ಮತ್ತು ಸರ್ವೀಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.   

ಅಂಕೋಲಾ:ತಾಲ್ಲೂಕಿನ ಅವರ್ಸಾದಲ್ಲಿ ಚತುಷ್ಪಥ ಹೆದ್ದಾರಿಯನ್ನುಅವೈಜ್ಞಾನಿಕವಾಗಿ ವಿಸ್ತರಣೆ ಮಾಡಲಾಗುತ್ತಿದೆ. ಸರ್ವಿಸ್ ರಸ್ತೆಯನ್ನೂ ನಿರ್ಮಿಸಿಲ್ಲ ಎಂದು ಆಕ್ಷೇಪಿಸಿ ಸ್ಥಳೀಯರು ಬುಧವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಮಾತೃಭೂಮಿ ಸಮಿತಿಯ ನೇತೃತ್ವದಲ್ಲಿ ಅವರ್ಸಾದಲ್ಲಿ ಸೇರಿದ ನೂರಾರು ಜನರು, ಕಾಮಗಾರಿಯ ಗುತ್ತಿಗೆ ಪಡೆದಿರುವ ಐಆರ್‌ಬಿ ಮತ್ತುಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಸಂಚಾಲಕ ಮಹೇಶ ನಾಯಕ ಮಾತನಾಡಿ, ‘ಅವರ್ಸಾ, ಹಟ್ಟಿಕೇರಿ, ಸಕಲಬೇಣ ಮತ್ತು ಹಾರವಾಡ ಗ್ರಾಮಗಳಿಗೆಅವರ್ಸಾ ಕೇಂದ್ರ ಸ್ಥಳವಾಗಿದೆ. ಇಲ್ಲಿ ಸುಮಾರು 12,500 ಜನಸಂಖ್ಯೆಯಿದೆ. ಅನೇಕ ಶಾಲಾ ಕಾಲೇಜುಗಳು, ಬ್ಯಾಂಕ್, ಕಲ್ಯಾಣ ಮಂಟಪ, ಅಂಗಡಿಗಳು, ದೇವಸ್ಥಾಗಳು, ಮೀನು ಮಾರುಕಟ್ಟೆ, ವಾರದ ಸಂತೆಯಿದೆ. ಹೀಗಿರುವಾಗ ಅವೈಜ್ಞಾನಿಕವಾಗಿ ಹೆದ್ದಾರಿಯನ್ನು ಎತ್ತರಗೊಳಿಸಲಾಗಿದೆ. ಈ ಮೂಲಕ ಜನರಿಗೆ ಹಿಂಸೆ ನೀಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

ಕೆಲವೆಡೆ ಅಂಡರ್‌ಪಾಸ್ ಕಾಮಗಾರಿಯನ್ನು ಪ್ರಭಾವಿಗಳ ಉಳಿವಿಗಾಗಿ ಬಿಡಲಾಗಿದೆ. ಈ ಹಿಂದೆ ಹೆದ್ದಾರಿ ಕಾಮಗಾರಿಯ ಮೂಲ ನೀಲನಕ್ಷೆ ತಯಾರಿಸುವಾಗ 45 ಮೀಟರ್ ಇದ್ದ ರಸ್ತೆಯನ್ನು 30 ಮೀಟರ್‌ಗೆ ಸೀಮಿತಗೊಳಿಸಲಾಗಿದೆ. ಇದರಿಂದ ಜನರ ಸಮಸ್ಯೆ ಹೆಚ್ಚಿದೆ ಎಂದು ಹೇಳಿದರು.

ಈ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದೆಯೂ ಪ್ರತಿಭಟನೆಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಸ್ತೆಗೆ ಎತ್ತಿನ ಗಾಡಿ:ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹಲವರು ತಮ್ಮ ಎತ್ತಿನ ಗಾಡಿಗಳನ್ನು ರಸ್ತೆಯಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಅನಂತ ಭಟ್, ಮಂಗಲದಾಸ ಕಾಮತ್, ಅವರ್ಸಾ ಗ್ರಾಮ ಪಂಚಾಯ್ತಿ ಸದಸ್ಯ ಮಾರುತಿ ಬಿ.ನಾಯ್ಕ, ಹಟ್ಟಿಕೇರಿ ಗ್ರಾಮ ಪಂಚಾಯ್ತಿ ಸದಸ್ಯ ವಿನೋದ ನಾಯ್ಕ, ನರೇಶ ನಾಯ್ಕ, ಮಹೇಶ ಪೈ, ಮೋಹನದಾಸ ಪೈ, ಲಕ್ಷ್ಮೀದಾಸ ಪೈ, ಪೀರು ನಾಯ್ಕ, ಪ್ರಶಾಂತ ಉಮೇಶ ಅವರ್ಸೇಕರ, ಮದನ ನಾಯಕ, ಹೊನ್ನಪ್ಪ ನಾಯಕ, ರಾಘವೇಂದ್ರ ಭಟ್ಇದ್ದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ವಿವೇಕ ಶೇಣ್ವಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಜತೆ ಚರ್ಚಿಸಿ ಕ್ರಮ ಕೈಗೊಳ್ಳುವಭರವಸೆ ನೀಡಿದರು. ಅಂಕೋಲಾ ಠಾಣೆಯ ಸಿಪಿಐ ಬಿ.ಪ್ರಮೋದಕುಮಾರ, ಪಿಎಸ್‌ಐಶ್ರೀಧರ ಭದ್ರತೆಯ ಉಸ್ತುವಾರಿ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.