ADVERTISEMENT

ಮುಂಡಗೋಡ | ನೇಮಕಾತಿ ಪ್ರಕ್ರಿಯೆಯಲ್ಲಿ ಅಸಮಾಧಾನ: ಅಂಗನವಾಡಿಗೆ ಬೀಗ

ನೇಮಕಾತಿಯಲ್ಲಿ ಸ್ಥಳೀಯರನ್ನು ಕಡೆಗಣಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:00 IST
Last Updated 23 ಜೂನ್ 2025, 14:00 IST
ಮುಂಡಗೋಡ ತಾಲ್ಲೂಕಿನ ನಾಗನೂರ ಅಂಗನವಾಡಿ ಕೇಂದ್ರಕ್ಕೆ ಸೋಮವಾರ ಗ್ರಾಮಸ್ಥರು ಬೀಗ ಹಾಕಿ ಆಯ್ಕೆ ಪ್ರಕ್ರಿಯೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು
ಮುಂಡಗೋಡ ತಾಲ್ಲೂಕಿನ ನಾಗನೂರ ಅಂಗನವಾಡಿ ಕೇಂದ್ರಕ್ಕೆ ಸೋಮವಾರ ಗ್ರಾಮಸ್ಥರು ಬೀಗ ಹಾಕಿ ಆಯ್ಕೆ ಪ್ರಕ್ರಿಯೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು   

ಮುಂಡಗೋಡ: ತಾಲ್ಲೂಕಿನ ನಾಗನೂರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯ ಆಯ್ಕೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ, ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿ, ಸಾರ್ವಜನಿಕರು ಸೋಮವಾರ ಅಂಗನವಾಡಿಗೆ ಬೀಗ ಹಾಕಿ ಆಯ್ಕೆ ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿದರು.

ಗ್ರಾಮದಲ್ಲಿ ಈ ಮೊದಲು ಒಂದು ಅಂಗನವಾಡಿ ಕೇಂದ್ರವಿದ್ದು, ಮತ್ತೊಂದು ಅಂಗನವಾಡಿ ಮಂಜೂರಿಯಾಗಿ, ಆಯ್ಕೆ ಪ್ರಕ್ರಿಯೆ ಈಚೆಗಷ್ಟೇ ಮುಗಿದಿದೆ. ಹೊಸ ಕಟ್ಟಡ ಇಲ್ಲದಿರುವುದರಿಂದ, ಹಾಲಿ ಇರುವ ಅಂಗನವಾಡಿ ಕೇಂದ್ರದಲ್ಲಿಯೇ ಹೊಸದಾಗಿ ನೇಮಕಗೊಂಡಿರುವ ಕಾರ್ಯಕರ್ತೆಯು ಪಾಠ ಮಾಡಲು ತೆರಳಿದ್ದಾರೆ. ಸ್ಥಳೀಯರಲ್ಲದ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಇದರಿಂದ ಸ್ಥಳೀಯ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ, ಸಿಡಿಪಿಒ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮಕ್ಕಳು ಅಂಗನವಾಡಿಗೆ ಬಂದು ಮನೆಗೆ ಮರಳಿದರು.

ಹೊಸ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನು ನೇಮಕ ಮಾಡಬೇಕು. ಈಗ ಮಾಡಿರುವ ನೇಮಕಾತಿಯನ್ನು ರದ್ದುಗೊಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕುವ ಕುರಿತು ಸಂಬಂಧಿಸಿದ ಅಧಿಕಾರಿಗೆ ಲಿಖಿತವಾಗಿ ತಿಳಿಸಲಾಗಿದೆ. ಬೇಡಿಕೆ ಈಡೇರುವರೆಗೂ ಅಂಗನವಾಡಿ ಕೇಂದ್ರದ ಬೀಗ ತೆಗೆಯಬಾರದೆಂದು ನಿರ್ಧರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಹೇಳಿದರು.

ADVERTISEMENT

ಯಶೋಧಾ ಪಾಟೀಲ, ನಾರಾಯಣ ವಡ್ಡರ, ರಮೇಶ ಜನಗೇರಿ, ಪ್ರಶಾಂತ ಭದ್ರಾಪುರ, ಗಣಪತಿ ಬದನಗೋಡ, ಸಾವಿತ್ರಿ ವಡ್ಡರ, ಕವಿತಾ ಭದ್ರಾಪುರ, ಗೌರಕ್ಕ ವಡ್ಡರ ಇದ್ದರು.

ಸರ್ಕಾರದ ನಿಯಮದಂತೆ ಆಯ್ಕೆ ಮಾಡಲಾಗಿದೆ

  ನಾಗನೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ಆಯ್ಕೆ ಪ್ರಕ್ರಿಯೆ ಸರ್ಕಾರದ ನಿಯಮದಂತೆ ಮಾಡಲಾಗಿದೆ. ಆದರೆ ಈಗ ಕೆಲವರು ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ. ಅಂಗನವಾಡಿಗೆ ಬೀಗ ಹಾಕುತ್ತೇವೆ ಎಂದು ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಸರಿಯಲ್ಲದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು ಅಥವಾ ನ್ಯಾಯಾಲಯಕ್ಕೆ ಹೋಗಿ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಸಿಡಿಪಿಒ ರಾಮು ಬಯಲುಸೀಮೆ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.