ADVERTISEMENT

ಭಟ್ಕಳ | ಲೋಕ ಅದಾಲತ್‌: 1464 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:22 IST
Last Updated 15 ಸೆಪ್ಟೆಂಬರ್ 2025, 4:22 IST
ಭಟ್ಕಳದ ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವೃದ್ದ ದಂಪತಿಗೆ ವಾಹನ ಅಪಘಾತ ಪರಿಹಾರ ಕೊಡಿಸಲಾಯಿತು
ಭಟ್ಕಳದ ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವೃದ್ದ ದಂಪತಿಗೆ ವಾಹನ ಅಪಘಾತ ಪರಿಹಾರ ಕೊಡಿಸಲಾಯಿತು   

ಭಟ್ಕಳ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಇರುವ ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟೂ 1464 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲಾಯಿತು.

ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ 320 ಪ್ರಕರಣಗಳು, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 550 ಪ್ರಕರಣಗಳು, ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ 594 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ವಿವಿಧ ರೀತಿಯಲ್ಲಿ ₹7,11,17,729 ಹಣವನ್ನು ವಿವಿಧ ಪರಿಹಾರ ಹಾಗೂ ದಂಡದ ರೂಪದಲ್ಲಿ ವಸೂಲು ಮಾಡಲಾಯಿತು.

ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶ ಕಾಂತ ಕುರಣಿ ನ್ಯಾಯಿಕೇತರ ಸಂಧಾನಕಾರರಾಗಿ ಮಂಜುನಾಥ ಚಂದ್ರಕಾಂತ ಭಟ್ಟ ಕಾರ್ಯನಿರ್ವಹಿಸಿದರು.

ADVERTISEMENT

ಒಟ್ಟೂ 361 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ತೆಗೆದುಕೊಂಡಿದ್ದು, ಅವುಗಳಲ್ಲಿ 320 ಪ್ರಕರಣಗಳನ್ನು ರಾಜೀಯಲ್ಲಿ ಇತ್ಯರ್ಥಪಡಿಸಲಾಯಿತು. ಚೆಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 75 ಪ್ರಕರಣಗಳು ಇತ್ಯರ್ಥವಾಗಿದ್ದು, ₹1,04,16,148 ಮೊತ್ತವನ್ನು ಕೊಡಿಸಲಾಯಿತು.

ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 4 ಪ್ರಕರಣಗಳಲ್ಲಿ ₹17,05,000 ಪರಿಹಾರ ಕೊಡಿಸಲಾಯಿತು. ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ 2019ರಲ್ಲಿ ಘಟಿಸಿದ ಅಪಘಾತದಲ್ಲಿ ತಮ್ಮ ಮಗನನ್ನು ಕಳೆದುಕೊಂಡ ವೃದ್ಧ ದಂಪತಿಗಳಿಗೆ ₹11,50,000 ಪರಿಹಾರವನ್ನು ವಾಹನ ಮಾಲೀಕರಿಂದ ಕೊಡಿಸಿದ್ದು, ವಾಹನಗಳಿಗೆ ವಿಮಾ ರಕ್ಷಣೆ ಇಲ್ಲದೇ ಇದ್ದರೆ ಯಾವ ರೀತಿಯ ತೊಂದರೆಗೆ ಸಿಲುಕುತ್ತೀರಿ ಎನ್ನುವ ಸಂದೇಶ ಲೋಕ ಅದಾಲತ್‌ನಲ್ಲಿ ನೀಡಲಾಯಿತು.

ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶೆ ದೀಪಾ ಅರಳಗುಂಡಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ರವಿಚಂದ್ರ ನಾಯ್ಕ ಕಾರ್ಯನಿರ್ವಹಿಸಿದರು. ಒಟ್ಟೂ 615 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ತೆಗೆದುಕೊಂಡಿದ್ದು ಅವುಗಳಲ್ಲಿ 550 ಪ್ರಕರಣಗಳು ರಾಜೀಯಲ್ಲಿ ಇತ್ಯರ್ಥಪಡಿಸಲಾಯಿತು.

ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಧನವತಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ನ್ಯಾಯವಾದಿ ಸಹನಾ ಮೊಗೇರ ಕಾರ್ಯನಿರ್ವಹಿಸಿದರು. ಒಟ್ಟೂ 603 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ತೆಗೆದುಕೊಂಡಿದ್ದು ಅವುಗಳಲ್ಲಿ 594 ಪ್ರಕರಣಗಳು ರಾಜೀಯಲ್ಲಿ ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್‌ನಲ್ಲಿ ವಕೀಲರ ಸಂಘದ ಅಧ್ಯಕ್ಷ ಈಶ್ವರ ನಾಯ್ಕ, ಸರ್ಕಾರಿ ಅಭಿಯೋಜಕರಾದ ಪುಟ್ಟಲಕ್ಷ್ಮೀ, ವಿವೇಕ ನಾಯ್ಕ, ಶೇಖರ ಹರಿಕಾಂತ, ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.