ADVERTISEMENT

ಕುಮಟಾದ ತ್ಯಾಜ್ಯ ಹೊನ್ನಾವರದಲ್ಲಿ ವಿಲೇವಾರಿ: ಹೆಚ್ಚಿದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 13:16 IST
Last Updated 24 ನವೆಂಬರ್ 2021, 13:16 IST
ಹೊನ್ನಾವರದ ರಾಮತೀರ್ಥದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕುಮಟಾ ಪಟ್ಟಣದ ತ್ಯಾಜ್ಯ ತಂದು ಹಾಕುತ್ತಿರುವುದನ್ನು ವಿರೋಧಿಸಿ ಹೊನ್ನಾವರದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ ಅವರಿಗೆ ಸ್ಥಳೀಯ ಮುಖಂಡರು ಬುಧವಾರ ಮನವಿ ಸಲ್ಲಿಸಿದರು
ಹೊನ್ನಾವರದ ರಾಮತೀರ್ಥದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕುಮಟಾ ಪಟ್ಟಣದ ತ್ಯಾಜ್ಯ ತಂದು ಹಾಕುತ್ತಿರುವುದನ್ನು ವಿರೋಧಿಸಿ ಹೊನ್ನಾವರದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ ಅವರಿಗೆ ಸ್ಥಳೀಯ ಮುಖಂಡರು ಬುಧವಾರ ಮನವಿ ಸಲ್ಲಿಸಿದರು   

ಹೊನ್ನಾವರ: ಪಕ್ಕದ ಕುಮಟಾ ಪಟ್ಟಣದ ತ್ಯಾಜ್ಯವನ್ನು ಹೊನ್ನಾವರ ತಾಲ್ಲೂಕಿನ ರಾಮತೀರ್ಥದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಸುರಿಯುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕುಮಟಾ ಪುರಸಭೆಯು ಸ್ವಂತದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿಕೊಳ್ಳಲಿ ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಪಟ್ಟಣದಲ್ಲಿ ಬುಧವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ ಭಟ್ಟ ಮಾತನಾಡಿ, ‘ನೆರಮನೆಯ ಕಸವನ್ನು ನಮ್ಮ ಮನೆಯಂಗಳಕ್ಕೆ ತಂದು ಹಾಕಿದರೆ ಸಹಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕುಮಟಾ ಪಟ್ಟಣದ ಕಸವನ್ನು ನಮ್ಮ ತಾಲ್ಲೂಕಿನಲ್ಲಿ ವಿಲೇವಾರಿ ಮಾಡುವ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ಶಾಸಕ ದಿನಕರ ಶೆಟ್ಟಿ ಈ ವಿಷಯದಲ್ಲಿ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿಗೆ ಅನುದಾನ ತರುವಲ್ಲಿ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇಲ್ಲಿ ಕಸ ವಿಲೇವಾರಿ ಮಾಡುವುದನ್ನು ಮುಂದುವರಿಸಿದರೆ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ಕುಮಟಾ ಪುರಸಭೆ ಹಾಗೂ ಶಾಸಕರು ಜವಾಬ್ದಾರರಾಗುತ್ತಾರೆ’ ಎಂದು ಎಚ್ಚರಿಸಿದರು.

ADVERTISEMENT

‘ಕುಮಟಾಕ್ಕೆ ಪ್ರಶಸ್ತಿಯೇ ಅಚ್ಚರಿ’:

‘ಕಸ ವಿಲೇವಾರಿಯ ಸ್ವಂತ ಘಟಕ ಇಲ್ಲದಿದ್ದರೂ ನಗರ ಸ್ವಚ್ಛತೆಗಾಗಿ ಕುಮಟಾ ಪುರಸಭೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿರುವುದು ಅಚ್ಚರಿಯ ಸಂಗತಿ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ಕಸ ವಿಲೇವಾರಿಯ ಸಮಸ್ಯೆಯು ನಾಲ್ಕೈದು ವರ್ಷಗಳಿಂದ ಇದೆ. ಆದರೂ ಹಿಂದಿನ ಹಾಗೂ ಈಗಿನ ಶಾಸಕರು ಸಮಸ್ಯೆ ಪರಿಹರಿಸುವಲ್ಲಿ ವಿಫಲಾರಾಗಿದ್ದಾರೆ. ಕುಮಟಾ ಪಟ್ಟಣದ ಕಸವನ್ನು ಹೊನ್ನಾವರ ತಾಲ್ಲೂಕಿನಲ್ಲಿ ವಿಲೇವಾರಿ ಮಾಡುವುದನ್ನು ತಕ್ಷಣದಿಂದ ನಿಲ್ಲಿಸಬೇಕು. ಮರಾಕಲ್ ಯೋಜನೆಯ ಮೂಲಕ ಕುಮಟಾ ತಾಲ್ಲೂಕಿನಿಂದ ಸರಬರಾಜಾಗುತ್ತಿರುವ ನೀರು ತಡೆ ಹಿಡಿಯುವ ಬೆದರಿಕೆಯ ತಂತ್ರ ಅನುಸರಿಸಿದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು’ ಎಂದು ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, ‘ಪ್ರಕರಣ ನ್ಯಾಯಾಲಯದಲ್ಲಿದ್ದು, ಕಸ ಇಲ್ಲಿ ವಿಲೇವಾರಿ ಆಗುವುದನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಕೀಲರೊಂದಿಗೆ ಮಾತನಾಡುತ್ತೇನೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೇಧಾ ನಾಯ್ಕ, ಅಧಿಕಾರಿ ವೆಂಕಟೇಶ ನಾಯ್ಕ ಇದ್ದರು.

ಮುಖಂಡರಾದ ಉಮೇಶ ಮೇಸ್ತ, ಲೋಕೇಶ ಮೇಸ್ತ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಉದಯರಾಜ ಮೇಸ್ತ, ಸುರೇಶ ಸಾರಂಗ, ಗಿರೀಶ ನಾಯ್ಕ, ಪ್ರದೀಪ ಶೆಟ್ಟಿ, ವಿವಿಧ ಸಂಘಟನೆಗಳ ಸದಸ್ಯರು, ಸಾರ್ವಜನಿಕರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.