ADVERTISEMENT

ಶಿರಸಿ: ರಥೋತ್ಸವ ಸಡಗರಕ್ಕೆ ಕ್ಷಣಗಣನೆ

ಝಗಮಗಿಸುವ ಮಂಟಪದೊಳಗೆ ದೇವಿ ಪ್ರತಿಷ್ಠೆ ಇಂದು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 15:49 IST
Last Updated 15 ಮಾರ್ಚ್ 2022, 15:49 IST
ರಾತ್ರಿ ವೇಳೆ ಬಣ್ಣ ಬಣ್ಣದ ಬೆಳಕಿನಿಂದ ಝಗಮಗಿಸುತ್ತಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಂಟಪ
ರಾತ್ರಿ ವೇಳೆ ಬಣ್ಣ ಬಣ್ಣದ ಬೆಳಕಿನಿಂದ ಝಗಮಗಿಸುತ್ತಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಂಟಪ   

ಶಿರಸಿ: ರಥಾರೂಢಳಾಗಿ ಬರುವ ಶಿರಸಿಯ ಅಧಿದೇವಿ ಮಾರಿಕಾಂಬೆ ಇಲ್ಲಿನ ಬಿಡಕಿಬೈಲಿನ ಜಾತ್ರಾಮಂಟಪಕ್ಕೆ ಮಾ.16 ರಂದು ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ಈ ಮೂಲಕ ಜಾತ್ರಾ ಮಹೋತ್ಸವಕ್ಕೆ ಹೊಸಕಳೆ ಬರಲಿದೆ.

ಮೈತುಂಬ ಆಭರಣಗಳನ್ನು ಹೊದ್ದ ಏಳು ಅಡಿ ಎತ್ತರದ ದೇವಿಯ ಮೂಲಮೂರ್ತಿಯೇ ದೇವಸ್ಥಾನದ ಗರ್ಭಗುಡಿಯಿಂದ ಬಂದು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಜಾತ್ರೆಯ ವಿಶೇಷ. ಸಹಸ್ರಾರು ಭಕ್ತರ ಜಯಘೋಷ, ಆವೇಶ ಭರಿತರಾಗಿ ಹರಕೆ ಒಪ್ಪಿಸುವವರ ನಡುವೆ ದೇವಿ ಕುಳಿತ ರಥ ಬರುವ ದೃಶ್ಯ ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ.

ರಥೋತ್ಸವಕ್ಕೆ ಮುನ್ನಾದಿನವಾದ ಮಂಗಳವಾರ ದೇವಸ್ಥಾನದಲ್ಲಿ ಕಲಶ ಪೂಜೆ ನಡೆಯಿತು. ಮಧ್ಯಾಹ್ನ ಮರ್ಕಿದುರ್ಗಿ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥದ ಶಿಖರಕ್ಕೆ ಕಲಶ ಪ್ರತಿಷ್ಠಾಪಿಸಲಾಯಿತು. ಧರ್ಮದರ್ಶಿ ಮಂಡಳದವರು, ಬಾಬುದಾರರು ರಥಕ್ಕೆ ಪೂಜೆ ಸಲ್ಲಿಸಿದರು. ಆ ಬಳಿಕ ಉಪ್ಪಾರರು, ಬಡಗಿಗಳು, ಆಚಾರಿಗಳು, ಮರಾಠಿಗರು ರಥಕ್ಕೆ ಪತಾಕೆ ಜೋಡಿಸಿದರು. ರಾತ್ರಿ ದೇವಿಯ ಕಲ್ಯಾಣೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದವು.

ADVERTISEMENT

ಸಿದ್ಧಗೊಂಡ ಜಾತ್ರೆಪೇಟೆ: ಜಾತ್ರಾ ಮಹೋತ್ಸವದ ಎರಡನೇ ದಿನ ಶೋಭಾಯಾತ್ರೆ ಮೂಲಕ ದೇವಿ ಬಿಡಕಿಬೈಲಿನ ಗದ್ದುಗೆಗೆ ಬಂದು ಕುಳಿತ ನಂತರ ಪೇಟೆಯ ಚಿತ್ರಣ ಬದಲಾಗುತ್ತದೆ. ಗದ್ದುಗೆಯ ಸುತ್ತಲಿನ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗುತ್ತದೆ. ಜನರು ಗುಂಪುಗುಂಪಾಗಿ ಬಂದು ದೇವಿ ದರ್ಶನ ಪಡೆದು ಜಾತ್ರೆಯ ಸಡಗರ ಆಸ್ವಾದಿಸುತ್ತಾರೆ.

ಈಗಗಲೆ ಬಿಡಕಿಬೈಲ್, ಶಿವಾಜಿಚೌಕ, ನಟರಾಜ ರಸ್ತೆ, ಹುಬ್ಬಳ್ಳಿ ರಸ್ತೆ ಕಡೆಗಳಲ್ಲಿ ಮಳಿಗೆಗಳು ತೆರೆದಿವೆ. ತಿನಿಸುಗಳು, ಆಟಿಕೆಗಳ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಸಿದ್ಧಗೊಂಡಿವೆ. ಅಮ್ಯೂಸಮೆಂಟ್ ಪಾರ್ಕ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಾರ್ವಜನಿಕ ಅನ್ನಸಂತರ್ಪಣೆ

ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಗರದ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಾರಿಕಾಂಬಾ ದೇವಸ್ಥಾನದ ವತಿಯಿಂದ ಪ್ರತಿನಿತ್ಯ ಹತ್ತು ಸಾವಿರ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ರಾಘವೇಂದ್ರ ವೃತ್ತದ ಬಳಿ ಸಂಸ್ಕೃತಿ ಪ್ರತಿಷ್ಠಾನ, ಉಣ್ಣೇಮಠಗಲ್ಲಿಯಲ್ಲಿ ಅನ್ನಪೂರ್ಣೇಶ್ವರಿ ಸೇವಾ ವೇದಿಕೆ ಅನ್ನಸಂತರ್ಪಣೆ ಮಾಡಲಿವೆ.

ರಥೋತ್ಸವ ನಡೆಯುವ ಮಾ.16 ರಂದು ಸಾರಿಕಾ ಸೇವಾ ಟ್ರಸ್ಟ್ ಹುಬ್ಬಳ್ಳಿ ರಸ್ತೆಯ ಎಪಿಎಂಸಿ ಗೇಟ್ ಬಳಿ ಅನ್ನಸಂತರ್ಪಣೆ ಹಮ್ಮಿಕೊಂಡಿದೆ. ಜಾತ್ರಾ ಗದ್ದುಗೆ ಸುತ್ತಮುತ್ತ, ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಸಂಘಸಂಸ್ಥೆಗಳ ಅರವಟಿಗೆ ಸೇವೆ ಹಮ್ಮಿಕೊಂಡಿದ್ದು ಪಾನಕ, ಮಜ್ಜಿಗೆ ವಿತರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.