ADVERTISEMENT

ಜನೌಷಧ ಸ್ಥಗಿತಕ್ಕೆ ಅಸಮಾಧಾನ

ದಾಳಿ ನಡೆದ 3 ದಿನದಲ್ಲೇ ಮಳಿಗೆ ಬಂದ್:ಬಡ ರೋಗಿಗಳಿಗೆ ಹೊರೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 7:15 IST
Last Updated 5 ಆಗಸ್ಟ್ 2025, 7:15 IST
ಮುಂಡಗೋಡ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವನ್ನು ಆರೋಗ್ಯ ಅಧಿಕಾರಿಗಳು ಬಂದ್‌ ಮಾಡಿಸಿರುವುದು
ಮುಂಡಗೋಡ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವನ್ನು ಆರೋಗ್ಯ ಅಧಿಕಾರಿಗಳು ಬಂದ್‌ ಮಾಡಿಸಿರುವುದು   

ಮುಂಡಗೋಡ: ಏಳೆಂಟು ತಿಂಗಳ ಹಿಂದೆ ಇಲ್ಲಿನ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಆರಂಭಗೊಂಡಿದ್ದ ಜನೌಷಧ ಕೇಂದ್ರಕ್ಕೆ ಸದ್ಯ ಬೀಗ ಹಾಕಲಾಗಿದೆ. ಬಡರೋಗಿಗಳಿಗೆ ಅನುಕೂಲವಾಗಿದ್ದ ಕೇಂದ್ರ ಬಂದ್‌ ಮಾಡಿರುವುದಕ್ಕೆ ಸಾರ್ವಜನಿಕರು ಅಸಮಾಧಾನದ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ, ಆಸ್ಪತ್ರೆಗೆ ಸಂಬಂಧಿಸಿದ ಕಟ್ಟಡದಲ್ಲಿಯೇ ನಡೆಯುತ್ತಿದ್ದ ಜನೌಷಧ ಕೇಂದ್ರವು ನಿಯಮಾವಳಿ ಉಲ್ಲಂಘನೆ ಮಾಡಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ನೇತೃತ್ವದ ತಂಡವು, ಜನೌಷಧ ಕೇಂದ್ರದ ಮೇಲೆ ದಿಢೀರ್‌ ದಾಳಿ ಮಾಡಿ ಪರಿಶೀಲಿಸಿದ್ದರು.

‘ಜನೌಷಧ ಅಷ್ಟೇ ಅಲ್ಲದೇ, ಬ್ರ್ಯಾಂಡೆಡ್‌ ಮಾದರಿಯ (ದುಬಾರಿ ಬೆಲೆ) ಔಷಧಗಳೂ ಅಲ್ಲಿ ಕಂಡುಬಂದಿದ್ದವು. ಈ ಕುರಿತು, ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಕಳಿಸಲಾಗಿತ್ತು. ಅಇಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮಳಿಗೆ ಸ್ಥಗಿತಗೊಳಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ದಾಳಿಯಾದ 2 ರಿಂದ 3 ದಿನಗಳಲ್ಲಿಯೇ, ಜನೌಷಧ ಕೇಂದ್ರ ಬಂದ್‌ ಮಾಡಿಸಲಾಗಿದೆ. ಆದರೆ, ಜನೌಷಧ ಕೇಂದ್ರ ಬಂದ್‌ ಮಾಡಿಸಲು, ಇದೊಂದೇ ಕಾರಣವೇ ಅಥವಾ ಬೇರೆ ಏನಾದರೂ ಇದೆಯೇ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

‘ಜನೌಷಧ ಕೇಂದ್ರದಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಏಕಾಏಕಿ ಬಂದ್‌ ಮಾಡಿಸಿರುವುದರಿಂದ, ಬಡರೋಗಿಗಳಿಗೆ ಔಷಧ ಖರೀದಿಗೆ ತೊಂದರೆಯಾಗಿದೆ. ಕಡಿಮೆ ಖರ್ಚಿನಲ್ಲಿ ಬಡರೋಗಿಗಳು ಔಷಧ ಖರೀದಿಸಿ, ಜೀವನ ನಿರ್ವಹಣೆ ಮಾಡುತ್ತಿದ್ದರು. ಅಂಥವರಿಗೆ ಆರೋಗ್ಯ ಇಲಾಖೆಯ ನಿರ್ಧಾರದಿಂದ ಹೊರೆಯಾಗಲಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್‌.ಫಕ್ಕೀರಪ್ಪ ಹೇಳಿದರು.

‘ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಬಂದ್‌ ಮಾಡಿಸಲು ಹೊರಟಿರುವುದು ದುರದೃಷ್ಟಕರ. ಬಡರೋಗಿಗಳ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿರುವುದು, ಖಂಡನೀಯ. ಒಂದು ವೇಳೆ, ಜನೌಷಧ ಕೇಂದ್ರಗಳು ನಿಯಮ ಉಲ್ಲಂಘಿಸಿದ್ದರೆ, ನೋಟಿಸ್‌ ಕೊಟ್ಟು, ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಯಾರದ್ದೋ ಲಾಬಿಗೆ ಮಣಿದು, ಬಡರೋಗಿಗಳ ಕೇಂದ್ರಗಳನ್ನು ಮುಚ್ಚಬಾರದು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ ಹೇಳಿದರು.

ರಿಯಾಯಿತಿಯಲ್ಲಿ ಔಷಧ ಸಿಗುತ್ತಿತ್ತು

‘ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲ ಔಷಧಗಳು ಸಿಗುವುದಿಲ್ಲ. ಕೆಲವೊಮ್ಮೆ ಹೊರಗಡೆ ತೆಗೆದುಕೊಳ್ಳಲು ವೈದ್ಯರು ಸೂಚಿಸುತ್ತಾರೆ. ಸಕ್ಕರೆ ಕಾಯಿಲೆ ರಕ್ತದೊತ್ತಡ ಸೇರಿದಂತೆ ನಿತ್ಯದ ಮಾತ್ರೆ ಔಷಧಗಳು ಜನೌಷಧ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಬಂದ್‌ ಮಾಡಿಸುವುದರಿಂದ ಬಡವರಿಗೆ ತೊಂದರೆ ಕೊಟ್ಟಂತಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.