ADVERTISEMENT

ಕಂದಾಯ–ಅರಣ್ಯ ಗೊಂದಲಕ್ಕೆ ಪರಿಹಾರ ಒದಗಿಸಿ

ಚಿಪಗಿ ಗ್ರಾಮಸ್ಥರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 11:16 IST
Last Updated 4 ಆಗಸ್ಟ್ 2019, 11:16 IST
ಇಸಳೂರು ಗ್ರಾಮ ಪಂಚಾಯ್ತಿ ಪ್ರಮುಖರು, ಚಿಪಗಿ ಗ್ರಾಮಸ್ಥರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು
ಇಸಳೂರು ಗ್ರಾಮ ಪಂಚಾಯ್ತಿ ಪ್ರಮುಖರು, ಚಿಪಗಿ ಗ್ರಾಮಸ್ಥರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ತಾಲ್ಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪಗಿ ಸರ್ವೆ ನಂಬರ್ 53ರಲ್ಲಿರುವ 500ರಷ್ಟು ಕುಟುಂಬಗಳ ನಿವೇಶನದ ಗೊಂದಲ ಪರಿಹರಿಸಬೇಕು ಎಂದು ಒತ್ತಾಯಿಸಿ, ಸ್ಥಳೀಯ ಜನಪ್ರತಿನಿಧಿಗಳು, ನಿವಾಸಿಗಳು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ನೀಡಿದರು.

ಈ ನಿವೇಶನಗಳಿರುವ ಸರ್ವೆ ನಂಬರ್ 53ರಲ್ಲಿ 252.20 ಎಕರೆ ಪ್ರದೇಶ ಅರಣ್ಯವಿದೆ. 1906ರಲ್ಲಿ ಇದು ಮೀಸಲು ಅರಣ್ಯವಾಗಿತ್ತು. 60 ಎಕರೆ ಪ್ರದೇಶ ಮಾತ್ರ ಡಿನೋಟಿಫೈ ಆಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿ ಯಾವುದೇ ವ್ಯವಹಾರ, ವಹಿವಾಟು ಪ್ರಕ್ರಿಯೆ ನಡೆಸದಂತೆ ಶಿರಸಿ ಉಪವಿಭಾಗಾಧಿಕಾರಿ ಅವರು ತಹಶೀಲ್ದಾರ್ ಮೂಲಕ ಸೂಚನೆ ನೀಡಿದ್ದಾರೆ.

ಇದರಿಂದ ಗ್ರಾಮ ಪಂಚಾಯ್ತಿ ವಸತಿ ಯೋಜನೆಯ ಮನೆ ಹಂಚಿಕೆ, ಹೊಸ ಕಟ್ಟಡ ನಿರ್ಮಾಣ, ಪರವಾನಗಿಗೆ ಪಡೆಯಲು, ನಿವೇಶನ ಪರಭಾರೆ, ಮಾರಾಟ ಅಥವಾ ನಿವೇಶನದ ಮೇಲೆ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಲ ಪಡೆಯಲು ಆಗುತ್ತಿಲ್ಲ. ಯಾವದೇ ವ್ಯವಹಾರ ನಡೆಸುವುದು ಕಷ್ಟವಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ಈ ವಿಷಯ ಚರ್ಚಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

‘1972ರಲ್ಲಿ ಸರ್ಕಾರದ ನಿಯಮಾನುಸಾರವಾಗಿ ನಿವೇಶನದಾರರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ನಿವೇಶನದ ಪಹಣಿ ಪತ್ರಿಕೆ, ವಾರಸಾ ಹಕ್ಕು ಆಗಿದೆ. 60 ಎಕರೆ ಜಮೀನು ಡಿಸ್‍ಫಾರೆಸ್ಟ್‌ ಆಗಿದ್ದು, ಅರಣ್ಯ ಇಲಾಖೆಗೆ ಸಂಬಂಧ ಬರುವುದಿಲ್ಲ. ಆದರೂ ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕಾರಿಗಳು ಸಭೆ ನಡೆಸಿ, ಮುಂದಿನ ನಿರ್ಣಯ ಆಗುವ ತನಕ ಜಾಗದ ಮೇಲೆ ವ್ಯವಹಾರ ನಡೆಸದಂತೆ ಸೂಚನೆಯನ್ನು ನೀಡಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಕಡತ ಲಭ್ಯವಿಲ್ಲವೆಂದರೆ ನಾವು ಹೊಣೆಯಲ್ಲ. ಮಂಜೂರು ಆಗಿರುವ ಜಾಗ, ಹಕ್ಕು ಬದಲಾವಣೆ ಇದ್ದರೂ 492 ಕುಟುಂಬಗಳಿಗೆ ಆತಂಕ ಎದುರಾಗಿದೆ. ಹೋರಾಟಕ್ಕೆ ಇಳಿಯುವ ಮುನ್ನ ನ್ಯಾಯ ಒದಗಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ಎಸಳೆ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಸದಸ್ಯ ಆರ್.ವಿ.ಹೆಗಡೆ, ಪ್ರಮುಖರಾದ ಸದಾನಂದ ಗೌಡ, ಗೋಪಾಲಕೃಷ್ಣ ನಾಯ್ಕ, ರಾಜು ಶೆಟ್ಟಿ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.