ADVERTISEMENT

ನ.5ರ ವರೆಗೆ ಪ್ರವಾದಿ ಮಾನವತೆಯ ಮಾರ್ಗದರ್ಶಕ ಅಭಿಯಾನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:41 IST
Last Updated 24 ಅಕ್ಟೋಬರ್ 2020, 2:41 IST

ಶಿರಸಿ: ‘ಪ್ರವಾದಿ ಮಹಮ್ಮದ್ ಮಾನವತೆಯ ಮಾರ್ಗದರ್ಶಕ’ ಎಂಬ ಅಭಿಯಾನವನ್ನು ಅ.23 ರಿಂದ ನ.5ರ ವರೆಗೆ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತಿದ್ದು, ಆ ಪ್ರಯುಕ್ತ ಶಿರಸಿಯಲ್ಲೂ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಭಟ್ಕಳದ ಜಮಾತೆ ಇಸ್ಲಾಮಿ ಹಿಂದ್ ನ ಪ್ರಮುಖ ಮಹಮ್ಮದ್ ರಝಾ ಮಾನ್ವಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರವಾದಿಯವರ ಜೀವನ, ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸಲಾಗುವುದು. ಅವರು ನೀಡಿದ ಸಂದೇಶ ಈ ಕಾಲಕ್ಕೂ ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದರು.

‘ದ್ವೇಷ, ಹಿಂಸೆ ಹಾಗೂ ಸ್ವಾರ್ಥಗಳು ಸಾಮಾನ್ಯವಾಗಿರುವ ಇಂದಿನ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಸಂದೇಶವನ್ನು ಎತ್ತಿಹಿಡಿಯುವುದು ಅನಿವಾರ್ಯವಾಗಿದೆ. ಪ್ರವಾದಿ ಮುಹಮ್ಮದ್‍ರ ಬಗ್ಗೆ ನಾಡಿನ ಸ್ವಾಮೀಜಿಗಳ, ಚಿಂತಕರ ವೀಡಿಯೋ ಸಂದೇಶಗಳನ್ನು ಪ್ರಸಾರಮಾಡಲಾಗುತ್ತದೆ. ರಾಜ್ಯದಾದ್ಯಂತ ವಿಚಾರ ವಿನಿಮಯ ಕಾರ್ಯಕ್ರಮಗಳ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಸಂದೇಶಗಳು, ಸಾರ್ವಜನಿಕ ಪ್ರಬಂಧ ಸ್ಪರ್ಧೆ, ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ’ ಎಂದು ವಿವರಿಸಿದರು.

ADVERTISEMENT

‘ಅಭಿಯಾನದ ಅಂಗವಾಗಿ ಅ.29 ರಂದು ಕಸ್ತೂರಬಾ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಅ.31ರಂದು ವಿಚಾರ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸೀರತ್ ಸಾಹಿತ್ಯಗಳ ವಿತರಣೆ, ಟ್ವಿಟರ್ ಅಭಿಯಾನ, ವಾಟ್ಸ್‌ಆ್ಯಪ್‌ ಸಂದೇಶ, ಸಾಮಾಜಿಕ ಜಾಲಾತಾಣಗಳ ವ್ಯಾಪಕ ಬಳಕೆ ಮೂಲಕ ಪ್ರವಾದಿ ಅವರ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸಲಾಗುತ್ತದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಶಿರಸಿ ಘಟಕದ ಅಧ್ಯಕ್ಷ ಅಬ್ದುಲ್ ಮನ್ನಾನ್ ತಿಳಿಸಿದರು. ತಲ್ಹಾ ಸಿದ್ದಿಬಾಪಾ, ಮುಕ್ತಾರ ಅಹ್ಮದ್ ಕೊತ್ವಾಲ್, ಫಯಾಜ್ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.