ಭಟ್ಕಳ ಸಮೀಪದ ಮುರ್ಡೇಶ್ವರದಲ್ಲಿರುವ ಗೃಹ ಕಚೇರಿಯಲ್ಲಿ ಸಚಿವ ಮಂಕಾಳ ವೈದ್ಯ ಅವರು ಮಹಿಳೆಯರ ಅಹವಾಲು ಆಲಿಸಿದರು
ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಸಮೀಪದ ಮುರ್ಡೇಶ್ವರದಲ್ಲಿರುವ ಗೃಹಕಚೇರಿಯಲ್ಲಿ ಬುಧವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ವಸತಿ ಶಾಲೆಯ ಪ್ರವೇಶಕ್ಕಾಗಿ ಉಡುಪಿ ಜಿಲ್ಲೆಯಿಂದ ಬಂದಿದ್ದ 6ನೇ ತರಗತಿ ಪಾಸಾದ ಅನಾಥ ಬಾಲಕನ ಮನವಿಗೆ ಸ್ಪಂದಿಸಿದ ಸಚಿವರು, ಉಡುಪಿ ಜಿಲ್ಲೆಯ ಅಧಿಕಾರಿಗಳಿಗೆ ಕರೆ ಮಾಡಿ ವಸತಿ ಶಾಲೆಗೆ ನೇರವಾಗಿ ಪ್ರವೇಶ ನೀಡುವಂತೆ ಸೂಚಿಸಿದರು. ಬಾಲಕನ ಮುಂದಿನ ಶಿಕ್ಷಣಕ್ಕೆ ಹಣಕಾಸಿನ ಸಮಸ್ಯೆ ಆದಲ್ಲಿ, ತಾನೇ ದತ್ತು ಪಡೆದು ಉಚಿತವಾಗಿ ಶಿಕ್ಷಣ ಕೊಡಿಸುವ ಭರವಸೆಯನ್ನೂ ನೀಡಿದರು.
‘ಬೆಳ್ಕೆ ಗ್ರಾಮೀಣ ಭಾಗಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸುವುದಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಜನರು ತಿಳಿಸಿದರು. ಭಟ್ಕಳ ಸಾರಿಗೆ ಸಂಸ್ಥೆಯ ವಿಭಾಗದ ವ್ಯವಸ್ಥಾಪಕರಿಗೆ ಕರೆ ಮಾಡಿದ ಸಚಿವರು, ನಿಗದಿತ ಸಮಯಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.
ಕುಡಿಯುವ ನೀರಿನ ಸಮಸ್ಯೆ, ಮನೆ ದುರಸ್ತಿ, ಚಿಕಿತ್ಸೆಗೆ ಧನಸಹಾಯ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳದಲ್ಲೆ ಇತ್ಯರ್ಥಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.