ADVERTISEMENT

ರಾಜೀನಾಮೆ ಕೊಟ್ಟರೂ ಸಭೆ ನಡೆಸಿದ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:52 IST
Last Updated 25 ಜುಲೈ 2019, 19:52 IST
   

ಯಲ್ಲಾಪುರ (ಉತ್ತರ ಕನ್ನಡ): ಸರ್ಕಾರದಿಂದ ಅನುದಾನ ಸಿಕ್ಕಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಶಿವರಾಮ ಹೆಬ್ಬಾರ್‌, ದಿಢೀರ್‌ ಕ್ಷೇತ್ರದಲ್ಲಿ ಹಾಜರಾಗಿ ಅಧಿಕಾರಿಗಳ ಸಭೆ ನಡೆಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ವಿಪ್ ಜಾರಿ ಮಾಡಿದರೂ ಅವರು ಸದನಕ್ಕೆ ಹಾಜರಾಗಿರಲಿಲ್ಲ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್‌ಗೆ ಹೋಗಿರುವ ಅವರು, ಕ್ಷೇತ್ರದ ಬಗ್ಗೆ ಕಾಳಜಿ ತೋರಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ರಾತ್ರಿ ಕ್ಷೇತ್ರಕ್ಕೆ ಬಂದ ಅವರು, ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ADVERTISEMENT

‘ನಮ್ಮಲ್ಲಿ ಯಾರೂ ಮೊದಲ ಬಾರಿ ಶಾಸಕರಾದವರಿಲ್ಲ. ಯಾರೂ ದುಡ್ಡು ನೋಡದವರೇನಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ವಿನಾ ಪಕ್ಷಕ್ಕಲ್ಲ. ಪಕ್ಷದ ಯಾವುದೇ ನಾಯಕರು ನಮ್ಮನ್ನು ಸಂಪರ್ಕಿಸಿಲ್ಲ. ಆದರೆ, ನಾವು ಮರಳಿ ಪಕ್ಷಕ್ಕೆ ಬರಬಾರದೆಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯ ಮಾಹಿತಿ ಪಡೆದ ಹೆಬ್ಬಾರ್, ಮಳೆ ಹಾನಿಗೆ ಸಂಬಂಧಿಸಿ ದೂರು ಬಂದಲ್ಲಿ ಶೀಘ್ರ ಪರಿಹಾರ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಕುಲಕರ್ಣಿ ಜೊತೆ ಹೆಬ್ಬಾರ್ ನಾಟಕ: ಅಧಿಕಾರಿಗಳ ಸಭೆ ನಡೆಸುತ್ತಿದ್ದ ಹೆಬ್ಬಾರ್, ‘ತುರ್ತು ಕರೆ ಬಂದಿದೆ. ಮುಂಬೈಗೆ ಮರಳುತ್ತಿದ್ದೇನೆ’ ಎನ್ನುತ್ತ ಸಭೆಯನ್ನು ಮೊಟಕುಗೊಳಿಸಿದರು. ದಿಢೀರ್ ಆಗಿ ಮಾಯವಾದ ಹೆಬ್ಬಾರ್, ಕೆಲ ಹೊತ್ತಿಗೆ ಮತ್ತೆ ಪ್ರತ್ಯಕ್ಷರಾದರು !

ಹೆಬ್ಬಾರ್ ಕ್ಷೇತ್ರದಲ್ಲಿರುವ ವಿಷಯ ತಿಳಿದು, ಅವರ ಮನವೊಲಿಸಲು ಮಾಜಿ ಸಚಿವ ವಿನಯ ಕುಲಕರ್ಣಿ ಯಲ್ಲಾಪುರಕ್ಕೆ ಭೇಟಿ ನೀಡುವವರಿದ್ದರು. ಈ ವಿಷಯ ತಿಳಿದ ಹೆಬ್ಬಾರ್, ‘ಮುಂಬೈಗೆ ಮರಳುತ್ತಿದ್ದೇನೆ’ ಎಂದು ಮಾಧ್ಯಮದ ಮುಂದೆ ಪ್ರಕಟಿಸಿದರು. ದೃಶ್ಯ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿದ ಕುಲಕರ್ಣಿ, ಯಲ್ಲಾಪುರ ಭೇಟಿ ರದ್ದುಗೊಳಿಸಿದರು. ಈ ಸಂಗತಿ ಗೊತ್ತಾದ ಮೇಲೆ ಹೆಬ್ಬಾರ್ ಮತ್ತೆ ಸಭೆ ಮಾಡಿ, ಹಳಿಯಾಳ ಮಾರ್ಗವಾಗಿ ಅಜ್ಞಾತ ಸ್ಥಳಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.