ADVERTISEMENT

ಶಿರಸಿ: ನೆರೆಗೆ ಹಾನಿ; ಕೃಷಿಭೂಮಿಗೆ ನರೇಗಾ ಕೆಲಸ

ಚಿಂಚಳಿಕೆಯಲ್ಲಿ ಕೆರೆ ಒಡ್ಡು ಒಡೆದು ಕೃಷಿಭೂಮಿಗಾದ ಹಾನಿ ವೀಕ್ಷಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 14:09 IST
Last Updated 1 ಆಗಸ್ಟ್ 2021, 14:09 IST
ಕೆರೆ ಒಡ್ಡು ಒಡೆದು ನೂರಾರು ಎಕರೆ ಕೃಷಿಭೂಮಿ ಹಾನಿ ಉಂಟಾಗಿದ್ದ ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ ಚಿಂಚಳಿಕೆಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು
ಕೆರೆ ಒಡ್ಡು ಒಡೆದು ನೂರಾರು ಎಕರೆ ಕೃಷಿಭೂಮಿ ಹಾನಿ ಉಂಟಾಗಿದ್ದ ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ ಚಿಂಚಳಿಕೆಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು   

ಶಿರಸಿ: ನೆರೆ ಹಾವಳಿಗೆ ಹಾನಿಗೀಡಾದ ತೋಟ, ಗದ್ದೆಗಳ ಪುನಶ್ಚೇತನಕ್ಕೆ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅಡಿ ಹೆಚ್ಚು ಕೆಲಸ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಚಿಂಚಳಿಕೆಯಲ್ಲಿ ಕೆರೆ ಒಡ್ಡು ಒಡೆದು ಕೃಷಿಭೂಮಿಗೆ ಉಂಟಾಗಿದ್ದ ಹಾನಿಭಾನುವಾರ ಪರಿಶೀಲಿಸಿದ ಬಳಿಕ ಮಾಧ್ಯದವರೊಡನೆ ಮಾತನಾಡಿದ ಅವರು, ‘ಮಳೆಗಾಲದ ಬಳಿಕ ಕೃಷಿ ಜಮೀನಿಗೆ ಮಣ್ಣಿನ ಕೆಲಸಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸದ್ಯ ತ್ವರಿತಗತಿಯಲ್ಲಿ ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.

‘ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಈಗಾಗಲೆ ಜಿಲ್ಲೆಯಲ್ಲಿ ತುರ್ತು ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಜೀವಹಾನಿ ಉಂಟಾಗದಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆ’ ಎಂದರು.

ADVERTISEMENT

‘ಶಿರಸಿ–ಕುಮಟಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ತುರ್ತು ಕ್ರಮವಹಿಸಲು ಸೂಚಿಸಲಾಗಿದೆ. ಮಳೆಗೆ ರಸ್ತೆಗೆ ಧಕ್ಕೆಯಾಗದಂತೆ ಕೆಲಸ ಮಾಡಲು ಎಚ್ಚರಿಸಿದ್ದೇನೆ’ ಎಂದರು.

‘ಬೆಂಗಳೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದ ಕಾರಣ ಕ್ಷೇತ್ರಕ್ಕೆ ತಕ್ಷಣವೇ ಭೇಟಿ ನೀಡಲು ಆಗಿರಲಿಲ್ಲ. ನೆರೆಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸುತ್ತೇನೆ’ ಎಂದರು.

ನೆರೆ ಬಾಧಿತ ಪ್ರದೇಶಗಳಾದ ಎಮ್ಮೆಗುಂಡಿ, ರೇವಣಕಟ್ಟಾ, ಬ್ಯಾಗದ್ದೆ, ನಗರದ ಆದರ್ಶನಗರ, ಮಹಾಲಕ್ಮಿ ಲೇಔಟ್, ಬಶೆಟ್ಟಿಕೆರೆ, ಗೌಳಿ ಓಣಿ ಸೇರಿದಂತೆ ವಿವಿಧೆಡೆ ಹಾನಿ ಪರಿಶೀಲಿಸಿದರು. ಹುಸರಿಯಲ್ಲಿ ಪ್ರವಾಹದಿಂದ ಮೃತಪಟ್ಟ ಗಂಗಾಧರ ಗೌಡ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಆರ್.ಡಿ.ಹೆಗಡೆ ಜಾನ್ಮನೆ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವಿನಾಯಕ ಹೆಗಡೆ, ಶಿವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ ಹೆಗಡೆ, ತಹಶೀಲ್ದಾರ್‌ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಇಒ ಎಫ್.ಜಿ.ಚೆನ್ನಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.