ADVERTISEMENT

ಆಸ್ತಿಗಾಗಿ ಏಳು ತಿಂಗಳ ಹಿಂದೆ ಕೃತ್ಯ: ಜಟಿಲ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಹುಬ್ಬಳ್ಳಿಯ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 15:52 IST
Last Updated 16 ನವೆಂಬರ್ 2020, 15:52 IST
ಕೊಲೆ ಮಾಡಿದ ಆರೋಪಿಗಳನ್ನು ಮುಂಡಗೋಡ ಪೊಲೀಸರು ಕಾರು ಸಮೇತ ಬಂಧಿಸಿರುವುದು. ಶಿರಶಿ ಡಿವೈಎಸ್ಪಿ ಜಿ.ಟಿ.ನಾಯ್ಕ, ಸಿಪಿಐ ಪ್ರಭುಗೌಡ ಕಿರೇದಳ್ಳಿ, ಪಿಎಸೈ ಬಸವರಾಜ ಮಬನೂರು ಹಾಗೂ ಸಿಬ್ಬಂದಿ ಚಿತ್ರದಲ್ಲಿದ್ದಾರೆ.
ಕೊಲೆ ಮಾಡಿದ ಆರೋಪಿಗಳನ್ನು ಮುಂಡಗೋಡ ಪೊಲೀಸರು ಕಾರು ಸಮೇತ ಬಂಧಿಸಿರುವುದು. ಶಿರಶಿ ಡಿವೈಎಸ್ಪಿ ಜಿ.ಟಿ.ನಾಯ್ಕ, ಸಿಪಿಐ ಪ್ರಭುಗೌಡ ಕಿರೇದಳ್ಳಿ, ಪಿಎಸೈ ಬಸವರಾಜ ಮಬನೂರು ಹಾಗೂ ಸಿಬ್ಬಂದಿ ಚಿತ್ರದಲ್ಲಿದ್ದಾರೆ.   

ಮುಂಡಗೋಡ: ತಾಲ್ಲೂಕಿನ ಕಾತೂರ ಅರಣ್ಯ ಪ್ರದೇಶದಲ್ಲಿ ಏಳು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದ್ದ ಪ್ರಕರಣವನ್ನು ಇಲ್ಲಿನ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಕೊಲೆ ಎಂದು ಗೊತ್ತಾಗಿದ್ದು, ನಾಲ್ವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಹುಬ್ಬಳ್ಳಿ ನವನಗರದ ವರದರಾಜ ಶ್ರೀನಿವಾಸ ನಾಯಕ (32) ಕೊಲೆಯಾದವರು. ಹುಬ್ಬಳ್ಳಿ ಉಣಕಲ್ ಪ್ರದೇಶದ ಅಭಿಷೇಕ್ ಶೇಟ್, ತಾಜ್‌ ನಗರದ ಸುರೇಶ ನೂರಪ್ಪ ಲಮಾಣಿ, ರಾಮಕುಮಾರ ಕೃಷ್ಣ ತಾಟಿಸಮ್ಲಾ ಹಾಗೂ ಕಾತೂರ ಗ್ರಾಮದ ಬಸವರಾಜ ಬಂಧಿತ ಆರೋಪಿಗಳು.

ಯಾವ ಸುಳಿವೂ ಇರಲಿಲ್ಲ:‌

ADVERTISEMENT

‘ಏಪ್ರಿಲ್ ತಿಂಗಳಲ್ಲಿ ಕಾತೂರ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ದೇಹದ ಭಾಗಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೊಲೆಯಾದವನ ಬಗ್ಗೆ ಯಾವುದೇ ಕುರುಹುಗಳು ಇದ್ದಿರಲಿಲ್ಲ. ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು. ರಾಜ್ಯದೆಲ್ಲೆಡೆ ದಾಖಲಾಗಿರುವ ನಾಪತ್ತೆ ಪ್ರಕರಣಗಳೊಂದಿಗೆ ಪರಿಶೀಲಿಸಿದರೂ ಈ ಪ್ರಕರಣಕ್ಕೆ ಹೋಲುವಂತಹ ಲಕ್ಷಣಗಳು ಕಂಡುಬಂದಿರಲಿಲ್ಲ’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭುಗೌಡ ಕಿರೇದಳ್ಳಿ ಹೇಳಿದರು.

ಆಸ್ತಿಗಾಗಿ ಕೊಲೆ:

‘ಆರೋಪಿ ಅಭಿಷೇಕ್, ಕೊಲೆಯಾದ ಶ್ರೀನಿವಾಸನ ತಾಯಿಯ ತಂಗಿ ಮಗ. ಕೊಲೆ ಮಾಡಿದರೆ ಶ್ರೀನಿವಾಸ ಅವರ ಎಲ್ಲ ಆಸ್ತಿ ತನಗೇ ಸಿಗುತ್ತದೆ ಎಂಬ ದುರಾಸೆಯಿಂದ ಕೃತ್ಯ ರೂಪಿಸಿದ್ದ. ಇತರ ಆರೋಪಿಗಳ ಸಹಾಯದಿಂದ ಕೊಲೆ ಮಾಡಿದ್ದ. ಶಿರಸಿ ಕಡೆ ಪ್ರವಾಸಕ್ಕೆ ಹೋಗುವ ನೆಪ ಮಾಡಿ, ನಾಗನೂರು ಸನಿಹದ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದರು. ನಂತರ ಬೆಲ್ಟ್‌ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಶವವನ್ನು ಬೈಕ್‌ನಲ್ಲಿ ಕಾಡಿನೊಳಗೆ ಒಯ್ದು, ಗುಂಡಿ ತೆಗೆದು ಮುಚ್ಚಿದ್ದರು. ಯಾರಿಗೂ ಸಂಶಯ ಬರದಿರಲಿ ಎಂದು, ಮೃತ ವ್ಯಕ್ತಿಯು ಸಂಬಂಧಿಕರ ಊರಿಗೆ ಹೋಗಿದ್ದಾನೆ ಎಂದು ಸುಳ್ಳು ಹೇಳಿದ್ದರು. ಅಲ್ಲದೇ, ಕಾಣೆಯಾದ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು. ಮೃತ ವ್ಯಕ್ತಿಯ ಮೊಬೈಲ್‍ ಅನ್ನು ಗೋವಾದಲ್ಲಿ ಸಮುದ್ರಕ್ಕೆ ಎಸೆದಿದ್ದರು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಎಸ್.ಪಿ. ಎಸ್.ಬದರಿನಾಥ, ಶಿರಸಿ ಡಿ.ವೈ.ಎಸ್ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭುಗೌಡ ಕಿರೇದಳ್ಳಿ, ಇನ್‌ಸ್ಪೆಕ್ಟರ್‌ಗಳಾದ ಬಸವರಾಜ ಮಬನೂರು, ಮೋಹಿನಿ ಶೆಟ್ಟಿ, ಎ.ಎಸ್.ಐ ಅಶೋಕ ರಾಠೋಡ, ಸಿಬ್ಬಂದಿ ಶರತ್ ದೇವಳ್ಳಿ, ಭಗವಾನ ಗಾಂವಕರ್, ವಿನೋದಕುಮಾರ.ಜಿ.ಬಿ, ರಾಘವೇಂದ್ರ ನಾಯ್ಕ, ಅರುಣ ಬಾಗೇವಾಡಿ, ಕುಮಾರ ಬಣಕಾರ, ವಿವೇಕ ಪಟಗಾರ, ತಿರುಪತಿ ಚೌಡಣ್ಣವರ, ರಾಘವೇಂದ್ರ ಪಟಗಾರ ತನಿಖಾ ತಂಡದಲ್ಲಿದ್ದರು. ಪ್ರಕರಣ ಬೇಧಿಸಿರುವ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.