ADVERTISEMENT

ಕಾರವಾರ: ನವರಾತ್ರಿಗೆ ರಂಗೇರಿಸಲಿದೆ ದಾಂಡಿಯಾ

ದೇವಿ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ: ಒಂಬತ್ತು ದಿನ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 15:22 IST
Last Updated 25 ಸೆಪ್ಟೆಂಬರ್ 2022, 15:22 IST
ಕಾರವಾರದ ಬಾಂಡಿಶಿಟ್ಟಾದಲ್ಲಿ ‍ಪ್ರತಿಷ್ಠಾಪನೆಗೆಂದು ತಯಾರಿಸಲಾದ ದೇವಿಯ ಆಕರ್ಷಕ ವಿಗ್ರಹಕ್ಕೆ ಕಲಾವಿದ ದತ್ತಾನಂದ ಕುರ್ಡೇಕರ್ ಭಾನುವಾರ ಬಣ್ಣ ಬಳಿಯುತ್ತಿರುವುದು
ಕಾರವಾರದ ಬಾಂಡಿಶಿಟ್ಟಾದಲ್ಲಿ ‍ಪ್ರತಿಷ್ಠಾಪನೆಗೆಂದು ತಯಾರಿಸಲಾದ ದೇವಿಯ ಆಕರ್ಷಕ ವಿಗ್ರಹಕ್ಕೆ ಕಲಾವಿದ ದತ್ತಾನಂದ ಕುರ್ಡೇಕರ್ ಭಾನುವಾರ ಬಣ್ಣ ಬಳಿಯುತ್ತಿರುವುದು   

ಕಾರವಾರ: ದಸರಾ ಹಬ್ಬದ ಸಂಭ್ರಮಕ್ಕೆ ನಗರ ಸಿದ್ಧಗೊಂಡಿದ್ದು, ಹತ್ತಾರು ಕಡೆಗಳಲ್ಲಿ ದುರ್ಗಾದೇವಿ ಮಂಟಪಗಳು ಸಜ್ಜುಗೊಂಡಿವೆ. ಸೆ.26ರಂದು ದೇವಿಯ ವಿಗ್ರಹ ಪ್ರತಿಷ್ಠಾಪನೆಯಾಗಿ ಒಂಬತ್ತು ದಿನ ವಿಶೇಷ ಪೂಜೆ ನೆರವೇರಲಿದೆ. ಅಲ್ಲದೇ ಈ ಬಾರಿ ದಾಂಡಿಯಾ, ಗರ್ಭಾ ನೃತ್ಯಗಳೂ ಮೇಳೈಸಲಿವೆ.

ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಉತ್ಸವವನ್ನು ಸರಳವಾಗಿ ನೆರವೇರಿಸಲಾಗಿತ್ತು. ಈ ಬಾರಿ ನಿರ್ಬಂಧಗಳು ಇಲ್ಲದಿರುವುದು, ಉತ್ಸವ ಆಯೋಜಕರ ಉತ್ಸಾಹ ಹೆಚ್ಚಿಸಿದೆ. ನಗರದ ಸೋನಾರವಾಡ, ಬಾಂಡಿಶಿಟ್ಟಾ, ಕುಂಠಿ ಮಹಾಮಾಯಿ ದೇವಸ್ಥಾನ, ನಂದನಗದ್ದಾ, ಕೋಟೇಶ್ವರ ದೇವಸ್ಥಾನ, ದೇವಳಿವಾಡ, ಕಳಸವಾಡಾ, ಕೆ.ಎಚ್.ಬಿ ಹೊಸ ಬಡಾವಣೆ ಸೇರಿದಂತೆ ಸೇರಿದಂತೆ ವಿವಿಧೆಡೆ ಕೋಲಾಟಕ್ಕೆ ಸಿದ್ಧತೆ ಮಾಡಲಾಗಿದೆ. ವಿದ್ಯುತ್ ದೀಪಗಳ ಅಲಂಕಾರವು ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣವನ್ನು ಮತ್ತಷ್ಟು ರಂಗೇರಿಸಿದೆ.

‘ಈ ಬಾರಿಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ರಾತ್ರಿ 8ರಿಂದ 11ರ ತನಕ ದಾಂಡಿಯಾ, ಗರ್ಭ ನೃತ್ಯಗಳು ಸಾಮಾನ್ಯವಾಗಿ ಇರುತ್ತವೆ. ಅಲ್ಲದೇ ಉತ್ಸವದ ಅಂಗವಾಗಿ ಮಹಿಳೆಯರಿಗೆ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿ, ಮಕ್ಕಳಿಗೆ ಮತ್ತು ಪುರುಷರಿಗೆ ಛದ್ಮವೇಷ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಉಳಿದಂತೆ, ಪ್ರತಿಷ್ಠಾಪಿತ ದೇವಿಯ ಮೂರ್ತಿಗೆ ಎಲ್ಲ ದಿನಗಳಲ್ಲೂ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳೂ ಇರಲಿವೆ’ ಎಂದು ಸೋನರವಾಡ ನವರಾತ್ರಿ ಉತ್ಸವ ಸಮಿತಿಯ ಪ್ರಮುಖ ಶ್ರೀಕಾಂತ್ ತಿಳಿಸಿದರು.

ADVERTISEMENT

ಮಹಿಳೆಯರಿಂದ ಡೋಲ್ ನೃತ್ಯ:

‘ಸೋನಾರವಾಡದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಮಹಿಳೆಯರಿಂದಲೇ ಡೋಲ್ ನೃತ್ಯ ಆಯೋಜಿಸಲಾಗಿದೆ. ಮಹಿಳೆಯರು ಕೆಲವು ದಿನಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಉತ್ಸವದ ಒಂದು ದಿನ ಇದು ವಿಶೇಷ ಆಕರ್ಷಣೆಯಾಗಲಿದೆ’ ಎಂದು ತಿಳಿಸಿದರು.

ಬಾಂಡಿಶಿಟ್ಟಾ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ನಂದಾ ಸಾವಂತ ಮಾಹಿತಿ ನೀಡಿ, ‘25 ವರ್ಷಗಳಿಂದ ನಮ್ಮ ಸಮಿತಿಯು ಉತ್ಸವ ಆಯೋಜಿಸುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ದಾಂಡಿಯಾ, ಗರ್ಭಾ ನೃತ್ಯಗಳು ಮತ್ತು ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.

‘ಅ.5ರಂದು ಮಧ್ಯಾಹ್ನ 3.30ಕ್ಕೆ ವಿಗ್ರಹದ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ನಗರದ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.