ADVERTISEMENT

ಆತಂಕ ಸೃಷ್ಟಿಸಿದ ವಿದೇಶಿ ಪ್ರಯಾಣಿಕ !

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 14:26 IST
Last Updated 23 ಮಾರ್ಚ್ 2020, 14:26 IST

ಶಿರಸಿ: ಸೋಮವಾರ ಬೆಳಿಗ್ಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರ ಕೈಗೆ ಚಪ್ಪೆ ಇರುವುದನ್ನು ಕಂಡ ಸಹ ಪ್ರಯಾಣಿಕರು ಗಾಬರಿಗೊಂಡರು. ಈ ವ್ಯಕ್ತಿ ಬಸ್‌ನಿಂದ ಇಳಿದ ಮೇಲೆ, ನಿರ್ವಾಹಕ ಹಾಗೂ ಸಹ ಪ್ರಯಾಣಿಕರು ಈ ಬಗ್ಗೆ ಚರ್ಚಿಸಿ, ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

‘ಬಸ್ ಇಳಿದ ಆ ವ್ಯಕ್ತಿ, ಆಟೊರಿಕ್ಷಾ ಹತ್ತಿದ್ದು, ಜಡೆಗೆ ಹೋಗುವುದಾಗಿ ಪಕ್ಕದವರೊಂದಿಗೆ ಹೇಳಿದ್ದನ್ನು ಕೇಳಿಸಿಕೊಂಡಿದ್ದೆ. ಕೈಗೆ ಚಪ್ಪೆ ಇರುವ, ಕ್ವಾರಂಟೀನ್‌ನಲ್ಲಿರುವವರು ಈ ರೀತಿ ಬಸ್ ಪ್ರಯಾಣ ಮಾಡಿದರೆ, ಸಹ ಪ್ರಯಾಣಿಕರಿಗೆ ಭಯವಾಗುತ್ತದೆ. ಆಡಳಿತ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ ಬಳಿ ಹೇಳಿದರು.

‘ವಿದೇಶದಲ್ಲಿದ್ದ ಈ ವ್ಯಕ್ತಿ ಭಾನುವಾರ ಬೆಂಗಳೂರಿಗೆ ಬಂದು, ಅಲ್ಲಿಂದ ಶಿರಸಿಗೆ ಬಸ್‌ನಲ್ಲಿ ಬಂದಿದ್ದಾರೆ. ಖಾಸಗಿ ವಾಹನ ಮಾಡಿಸಿಕೊಂಡು ಊರಿಗೆ ಬಂದಿದ್ದಾರೆ. ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ್ದಾರೆ. 14 ದಿನಗಳವರೆಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ. ಈ ವ್ಯಕ್ತಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಸದ್ಯ ಆರೋಗ್ಯವಾಗಿದ್ದಾರೆ’ ಎಂದು ಜಡೆ ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.

ADVERTISEMENT

ಹೆಚ್ಚುತ್ತಿರುವ ವಿದೇಶಿ ನಿವಾಸಿಗಳು

ವಿವಿಧ ದೇಶಗಳಲ್ಲಿ ಕೋವಿಡ್–19 ವ್ಯಾಪಿಸುತ್ತಿದ್ದಂತೆ, ವಿದೇಶದಲ್ಲಿ ನೆಲೆಸಿದ್ದ ಜನರು ಊರಿಗೆ ಮರಳುತ್ತಿದ್ದಾರೆ. ಕಳೆದ 20 ದಿನಗಳಿಂದ 90ಕ್ಕೂ ಹೆಚ್ಚು ಜನರು ಶಿರಸಿಗೆ ಬಂದಿದ್ದಾರೆ. ಅನೇಕರು ಕ್ವಾರಂಟೀನ್ ಮುಗಿಸಿದ್ದು, ಇನ್ನು ಹಲವರು ಕ್ವಾರಂಟೀನ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.