ಶಿರಸಿ: ಹಿಂದಿನ ತಲೆಮಾರಿನ ವೈವಿಧ್ಯಮಯ ವಸ್ತುಗಳು ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿದ್ದು, ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಹಾಗೂ ಪುಸ್ತಕ ಪ್ರೀತಿ ಪುನರುಜ್ಜೀವನ ಮಾಡುವ ಆಶಯದೊಂದಿಗೆ ‘ಕಣಜ’ ಹೆಸರಿನ ವಸ್ತು ಸಂಗ್ರಹಾಲಯ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಲ್ಲಿನ ವಿದ್ಯಾನಗರ ರುದ್ರಭೂಮಿ ಸಮಿತಿಯಡಿ ವಸ್ತು ಸಂಗ್ರಹಾಲಯ ಆರಂಭಗೊಂಡಿದ್ದು, 600 ಚದರಡಿ ವಿಸ್ತೀರ್ಣದ ಕಟ್ಟಡದಲ್ಲಿ ವೈವಿಧ್ಯಮಯ ವಸ್ತುಗಳ ಜತೆ ಜ್ಞಾನ ತೃಷೆ ತಣಿಸುವ ಪುಸ್ತಕಗಳನ್ನು ಜೋಡಿಸಲಾಗಿದೆ. ಪುರಾತನವಾಗಿ ಲಭ್ಯವಿದ್ದ ನಮ್ಮ ನೆಲಮೂಲದ ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ ಇವು ಕಣಜದ ಸ್ಥೂಲ ಚಟುವಟಿಕೆಗಳಾಗಿವೆ.
ಹವ್ಯಕ ಮನೆತನಕ್ಕೆ ಸಂಬಂಧಿಸಿ ಎರಡು, ಮೂರು ತಲೆಮಾರಿನ ಹಿಂದೆ ಬಳಸುತ್ತಿದ್ದ ದಿನ ಬಳಕೆ ವಸ್ತುಗಳು ಈಗ ಎಲ್ಲಿಯೂ ಕಾಣ ಸಿಗುವುದಿಲ್ಲ. ಆದರೆ, ಕಣಜದಲ್ಲಿ ಈಗಲೂ ಅತಿ ಪುರಾತನವಾದ ಸಿದ್ದೆ, ಶೇಪು, ಪಾವಿನಂಥ ಅಳತೆ ಪಾತ್ರೆಗಳು, ಹಾಲಿನ ಪಾತ್ರೆ, ಮಣ್ಣಿನ ಮಡಿಕೆ, ಪಾತ್ರೆಗಳು, ಹುಟ್ಟುಗಳು, ಅಡ್ಡ ಕತ್ತರಿಗಳು, ಕಲ್ಲು ಪಾತ್ರೆಗಳು, ಮರಿಗೆ, ಕುಟಾಣಿ, ಸಂಬಾರ ಅರೆಯುವ ಕಲ್ಲು, ಚಿಮಣಿ ಬುಡ್ಡಿ, ಲಾಟಿನ್, ಗ್ಯಾಸ್ ಲೈಟ್, ಮಣ್ಣಿನ ಹಣತೆ, ಬಾಚಣಿಕೆಗಳು, ತಾಮ್ರದ ಹರಿವಾಣ, ಸಂಧ್ಯಾಕ್ಷತೆ ಪಾತ್ರೆ, ಹಳೆಯ ತಾಮ್ರದ ಕೊಡಗಳು, ದೇವರಿಗೆ ಹಚ್ಚುವ ವಿವಿಧ ಬಗೆಯ ದೀಪ ಕಂಬಗಳು, ಮಜ್ಜಿಗೆ ಕಡೆಯುವ ಕಡಗೋಲು ಸೇರಿದಂತೆ 400ಕ್ಕೂ ಹೆಚ್ಚಿನ ವಸ್ತುಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಇವುಗಳ ಜತೆಗೆ 1934ರ ಗ್ರಾಮೋಫೋನ್ ಕೂಡ ಇದ್ದು, ಇಂದಿಗೂ ಸುಸ್ಥಿತಿಯಲ್ಲಿದ್ದು, ಹಾಡನ್ನು ಗುನುಗನಿಸುತ್ತದೆ!
‘ಹಳೆಯ ವಸ್ತುಗಳ ಜತೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಬಹುತೇಕ ಎಲ್ಲ ಸಾಹಿತಿಗಳ ಸಾವಿರಾರು ಪುಸ್ತಕಗಳು ಇಲ್ಲಿ ಲಭ್ಯವಿದೆ. ಜತೆ, 30ಕ್ಕೂ ಹೆಚ್ಚು ವಿವಿಧ ಜಿಲ್ಲಾ ಹಂತದ ಪತ್ರಿಕೆಗಳು ಓದುಗರ ಜ್ಞಾನ ದಾಹ ತಣಿಸುತ್ತಿವೆ’ ಎನ್ನುತ್ತಾರೆ ಇಲ್ಲಿಗೆ ಓದಲು ಬರುವ ರಮೇಶ ಹೆಗಡೆ.
‘ನಿತ್ಯ ಸಂಜೆ 4 ರಿಂದ 6 ಗಂಟೆಯವರೆಗೆ ಕಣಜದ ಬಾಗಿಲು ತೆರೆದಿರುತ್ತದೆ. ಯಾರು ಬೇಕಿದ್ದರೂ ಬಂದು ಓದಬಹುದು. ಪೂರ್ವಜರು ಬಳಸುತ್ತಿದ್ದ ವಸ್ತುಗಳನ್ನು ನೋಡಿ ಆನಂದಿಸಬಹುದು. ಪ್ರತಿ ವಸ್ತುವಿನ ಮೇಲೆ ಅದರ ಹೆಸರಿನ ಲೇಬಲ್ ಅಳವಡಿಸಲಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಲಿಯೇ ವೀಕ್ಷಕರಿಗೆ ವಿವರಿಸಲಾಗುತ್ತದೆ. ವೀಕ್ಷಣೆಗೆ ಯಾವುದೇ ದರವಿಲ್ಲ’ ಎಂದು ಇಲ್ಲಿನ ಉಸ್ತುವಾರಿ ವಿ.ಪಿ.ಹೆಗಡೆ ವೈಶಾಲಿ ಹೇಳಿದರು.
ಕೆಲವೊಂದು ಪುರಾತನ ವಸ್ತುಗಳು ವರ್ತಮಾನ ಸಂದರ್ಭದಲ್ಲಿ ಬಳಕೆ ಮಾಡದ ಕಾರಣ ಮನೆಯ ಮೂಲೆ ಸೇರಿ ಜೀರ್ಣಗೊಳ್ಳುತ್ತವೆ. ಅಂಥ ಅಪರೂಪದ ವಸ್ತುಗಳಿದ್ದರೆ ಕಣಜದ ತೆಕ್ಕೆಗೆ ನೀಡಬಹುದು. ಅವುಗಳಿಗೆ ಧಕ್ಕೆಯಾಗದ ರೀತಿ ರಕ್ಷಣೆ ಮಾಡಲಾಗುವುದುವಿ.ಪಿ.ಹೆಗಡೆ ವೈಶಾಲಿ ‘ಕಣಜ’ ವಸ್ತು ಸಂಗ್ರಹಾಲಯದ ಮೇಲುಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.