ADVERTISEMENT

ಸೋರುವ ಸೂರು ಅಜ್ಜನಿಗೆ ಆಸರೆ

ಮಳೆಯಿಂದ ಮನೆಯ ಚಾವಣಿ, ಗೋಡೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:40 IST
Last Updated 7 ಆಗಸ್ಟ್ 2022, 7:40 IST
ಶಿರಸಿಯ ಗಣೇಶ ನಗರದಲ್ಲಿ ಚಾವಣಿ ಕುಸಿದ ಮನೆಯಲ್ಲಿ ವಾಸವಿರುವ ರಾಮಾ ಹಿರೇಮಠ
ಶಿರಸಿಯ ಗಣೇಶ ನಗರದಲ್ಲಿ ಚಾವಣಿ ಕುಸಿದ ಮನೆಯಲ್ಲಿ ವಾಸವಿರುವ ರಾಮಾ ಹಿರೇಮಠ   

ಶಿರಸಿ: ಮಳೆ–ಗಾಳಿಗೆ ಮುರಿದು ಬಿದ್ದ ಅರ್ಧ ಚಾವಣಿ, ನೀರಿನಲ್ಲಿ ನೆನೆದು ಬೀಳುವ ಹಂತದಲ್ಲಿರುವ ಮಣ್ಣಿನ ಗೋಡೆಗಳು. ಆದರೆ ಇವುಗಳ ನಡುವೆಯೇ ಆಸರೆ ಪಡೆದುಕೊಳ್ಳುವ ಅನಿವಾರ್ಯ ಸ್ಥಿತಿ ಈ ಅಜ್ಜನದ್ದು.

ಇಲ್ಲಿನ ಗಣೇಶ ನಗರದ ರಾಮಾ ಹನುಮಂತಪ್ಪ ಹಿರೇಮಠ ಎಂಬ ವೃದ್ಧ ವಾಸಿಸುವ ಮನೆ ಮಳೆಗೆ ದುಸ್ಥಿತಿಯ ಹಂತ ತಲುಪಿದೆ. ಒಬ್ಬಂಟಿಯಾಗಿ ವಾಸವಿರುವ ಅಜ್ಜನಿಗೆ ಮನೆ ದುರಸ್ತಿ ಮಾಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಮಳೆನೀರು ಮನೆಯೊಳಗೆ ತುಂಬಿಕೊಳ್ಳುತ್ತಿದ್ದರೂ ಅಲ್ಲಲ್ಲಿ ಪಾತ್ರೆಗಳನ್ನಿಟ್ಟಿರುವ ರಾಮಾ ಅವರು ಮನೆಯ ಆವರಣದಲ್ಲಿ ಮಂಚ ಹಾಕಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ನೆರೆ ಮನೆಯವರು ನೀಡಿದ ಊಟ, ಉಪಹಾರವನ್ನೇ ನಂಬಿ ದಿನ ಕಳೆಯುತ್ತಿದ್ದಾರೆ.

‘ನಾಲ್ಕು ದಿನದ ಹಿಂದೆ ಏಕಾಏಕಿ ಮಳೆ ಸುರಿದ ವೇಳೆ ಹಳತಾಗಿದ್ದ ಚಾವಣಿ ಮುರಿದು ಬಿದ್ದಿತ್ತು. ಅದನ್ನು ದುರಸ್ತಿಪಡಿಸಲಾಗದೆ ಹಾಗೆಯೇ ಬಿಟ್ಟಿದ್ದೇನೆ. ವೃದ್ಧಾಪ್ಯ ವೇತನದ ಹೊರತಾಗಿ ಬೇರೆ ಆದಾಯವಿಲ್ಲದ ಕಾರಣ ಮನೆ ದುರಸ್ತಿ ಮಾಡಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ ರಾಮಾ ಹಿರೇಮಠ.

ADVERTISEMENT

ಮನೆಗೆ ಹಾನಿಯಾಗಿರುವ ಕುರಿತು ವಿಷಯ ತಿಳಿದ ನಗರಸಭೆ ಪೌರಾಯುಕ್ತ ಕೇಶವ ಚೌಗುಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕವಾಗಿ ಚಾವಣಿಗೆ ಅಳವಡಿಸಲು ತಾಡಪತ್ರಿಯನ್ನು ನೀಡಿದರು. ‘ಮಳೆ ಇರುವ ಕಾರಣ ಅವರನ್ನು ಸ್ಥಳಾಂತರಿಸಲು ಮನವೊಲಿಸಲಾಯಿತು. ರಾಮಾ ಅವರು ಇದಕ್ಕೆ ಒಪ್ಪಿಲ್ಲ. ಮಳೆ ಕಡಿಮೆಯಾದ ಬಳಿಕ ಆಸರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಪ್ರಯತ್ನಿಸಲಾಗುವುದು’ ಎಂದು ಪೌರಾಯುಕ್ತ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.