ADVERTISEMENT

230 ವಿದ್ಯಾರ್ಥಿಗಳಿಗೆ ಮೂರೇ ಕೊಠಡಿ!

ಶಿರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗದ ಕೊರತೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:45 IST
Last Updated 12 ನವೆಂಬರ್ 2019, 19:45 IST
ಕಾರವಾರ ತಾಲ್ಲೂಕಿನ ಶಿರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿರುವುದು
ಕಾರವಾರ ತಾಲ್ಲೂಕಿನ ಶಿರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿರುವುದು   

ಕಾರವಾರ: ತಾಲ್ಲೂಕಿನ ಶಿರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. 230 ವಿದ್ಯಾರ್ಥಿಗಳು ಕೇವಲ ಮೂರು ಕೊಠಡಿಗಳಲ್ಲಿ ಪಾಠ ಕೇಳಬೇಕಿದೆ ಎಂದುಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಈ ಶಾಲೆಯ ಹೆಸರಿನಲ್ಲಿ 20 ಗುಂಟೆ ಜಮೀನಿದೆ. ಅದರಲ್ಲಿರುವ ಕಟ್ಟಡಗಳಲ್ಲಿ ಮೊದಲಿನಿಂದಲೂ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ವರ್ಷ ಕರ್ನಾಟಕ ಪಬ್ಲಿಕ್ ಶಾಲೆಯನ್ನೂ ಆರಂಭಿಸಲಾಗಿದೆ. ಆದರೆ, ಅಗತ್ಯಕ್ಕೆ ಸರಿಯಾಗಿ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಜೊತೆಗೇ ಪದವಿಪೂರ್ವ ಕಾಲೇಜು ಕಟ್ಟಡವನ್ನೂ ಇದರ ಆವರಣದಲ್ಲೇ ಕಟ್ಟಲಾಗುತ್ತಿದೆ ಎಂಬುದು ಪೋಷಕರ ದೂರಾಗಿದೆ.

ಎಲ್‌.ಕೆ.ಜಿ.ಯಿಂದ ಏಳನೇ ತರಗತಿಯವರೆಗೆ 230 ವಿದ್ಯಾರ್ಥಿಗಳಿದ್ದಾರೆ. ಪ್ರೌಢಶಾಲೆಯಲ್ಲಿ ಸುಮಾರು 180 ಹಾಗೂ ಕಾಲೇಜಿನಲ್ಲಿ ಸುಮಾರು 80 ವಿದ್ಯಾರ್ಥಿಗಳಿದ್ದಾರೆ.

ADVERTISEMENT

‘ಈಗಲೇ ವಿದ್ಯಾರ್ಥಿಗಳಿಗೆ ಆಡಲು ಮೈದಾನದ ಕೊರತೆಯಾಗುತ್ತಿದೆ. ಶಾಲೆಯ ಕೊಠಡಿಗಳನ್ನು ಒಡೆದು ಪಿ.ಯು ಕಟ್ಟಡವನ್ನೂ ನಿರ್ಮಿಸಲಾಗುತ್ತಿದೆ. ಆದರೆ, ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕೊಠಡಿಗಳಲ್ಲಿ ಕೂರಿಸುವಂತಾಗಿದೆ. ಜಾಗದ ಕೊರತೆಯಿಂದ ಪ್ರೌಢಶಾಲೆಯ ಸಭಾಂಗಣದಲ್ಲಿ ಆರು ಮತ್ತು ಏಳನೇ ತರಗತಿ ನಡೆಸಲಾಗುತ್ತಿದೆ. ಅಲ್ಲಿ ಪ್ರತಿಧ್ವನಿ ಮೊಳಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಸಾವಂತ್ ಬೇಸರಿಸಿದರು.

ಹಿರಿಯ ಪ್ರಾಥಮಿಕ ಶಾಲೆಯ ಅಧೀನದಲ್ಲಿ ಮೊದಲು ಎಂಟು ಕೊಠಡಿಗಳಿದ್ದವು. ಈಗ ಮೂರೇ ಉಳಿದಿವೆ. ಅವೆಲ್ಲವೂ ಬೇರೆಬೇರೆಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹಾಗಾಗಿ ಶೀಘ್ರವೇ ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಶಾಲೆಗೆ ಕೊಠಡಿಗಳನ್ನು ಹಸ್ತಾಂತರಿಸಬೇಕು ಎಂದು ಪೋಷಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.