ADVERTISEMENT

ಮುಂಡಗೋಡ: ಮತ್ತೆ ‘ಮುಂಡಗೋಡ ಹಬ್ಬ’ಕ್ಕೆ ಒತ್ತಾಸೆ

‘ಜನಪದ ಉತ್ಸವ’ ಆಯೋಜನೆಯ ಶೈಲಿಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ

ಶಾಂತೇಶ ಬೆನಕನಕೊಪ್ಪ
Published 5 ನವೆಂಬರ್ 2022, 19:30 IST
Last Updated 5 ನವೆಂಬರ್ 2022, 19:30 IST
2016ರಲ್ಲಿ ಮುಂಡಗೋಡ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ಮುಂಡಗೋಡ ಹಬ್ಬದ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದ ನೃತ್ಯ (ಸಂಗ್ರಹ ಚಿತ್ರ)
2016ರಲ್ಲಿ ಮುಂಡಗೋಡ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ಮುಂಡಗೋಡ ಹಬ್ಬದ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದ ನೃತ್ಯ (ಸಂಗ್ರಹ ಚಿತ್ರ)   

ಮುಂಡಗೋಡ: ‘ಅರೆ ಮಲೆನಾಡು ತಾಲ್ಲೂಕು’ ಎಂದು ಕರೆಯಿಸಿಕೊಂಡಿರುವ ಮುಂಡಗೋಡದಲ್ಲಿ ಗ್ರಾಮೀಣ ಕಲೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ದಶಕಗಳಿಂದ ಕೇಳಿಬರುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕಾಟಾಚಾರಕ್ಕೆ ಎಂಬಂತೆ, ಯಾರಿಗೂ ತಿಳಿಯದಂತೆ ಜನಪದ ಉತ್ಸವ ನಡೆಸಿ, ಕೈ ತೊಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಬಲವಾಗಿದೆ.

ಈ ತಾಲ್ಲೂಕಿನಲ್ಲಿ ಕಾನನದ ಮಧ್ಯೆ ವಾಸಿಸುವ ಗೌಳಿಗರು, ಲಂಬಾಣಿಗರು, ಡಮಾಮಿ ನೃತ್ಯಕ್ಕೆ ನಾಡಿನೆಲ್ಲೆಡೆ ಹೆಸರು ವಾಸಿಯಾಗಿರುವ ಸಿದ್ದಿ ಜನಾಂಗದವರು, ಬುಡಕಟ್ಟು ಜನಾಂಗದವರು, ಕೇರಳ, ತಮಿಳುನಾಡಿನಿಂದ ಬಂದು ಇಲ್ಲಿಯೇ ಬದುಕು ಕಟ್ಟಿಕೊಂಡಿರುವರು, ವಲಸಿಗರಾಗಿ ನೆಲೆಸಿರುವ ಟಿಬೆಟನ್‌ರು, ನೇಪಾಳಿಗರು ಸೇರಿದಂತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜೈನ ಧರ್ಮೀಯರು ವಾಸವಿದ್ದಾರೆ. ಭಾಷೆ, ಧರ್ಮ, ಪ್ರಾಂತ್ಯಗಳ ಬೇಧವಿಲ್ಲದಂತೆ ಬದುಕು ಕಟ್ಟಿಕೊಂಡು, ಅರೆಮಲೆನಾಡಿನ ಸೊಬಗನ್ನು ಹೆಚ್ಚಿಸಿದ್ದಾರೆ.

ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಸರ್ಕಾರಿ ಪ್ರಾಯೋಜಿತ ಇಲ್ಲವೇ ಸಂಘಸಂಸ್ಥೆಗಳ ಆಶ್ರಯದಲ್ಲಿ ವರ್ಷಕ್ಕೊಮ್ಮೆ ಉತ್ಸವ, ಹಬ್ಬದ ಹೆಸರಿನಲ್ಲಿ ಆಯಾ ತಾಲ್ಲೂಕಿನ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳ್ಳೂತ್ತದೆ. ಆದರೆ, ಈ ತಾಲ್ಲೂಕು ಮಾತ್ರ ಇವೆಲ್ಲವುಗಳಿಂದ ವಂಚಿತವಾಗಿದೆ.

ADVERTISEMENT

‘ಜನಪದ ಉತ್ಸವ’ದ ಬಗ್ಗೆ ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಕಲಾವಿದರು ಸೇರಿದಂತೆ ಯಾರೊಬ್ಬರಿಗೂ ಕಾರ್ಯಕ್ರಮದ ಆಮಂತ್ರಣ ನೀಡದೇ ಕೇವಲ ದಾಖಲಾತಿಗಾಗಿ ನಡೆಯುತ್ತದೆ. ಜಿಲ್ಲಾಮಟ್ಟದ ಉತ್ಸವವು ನಾಲ್ಕೈದು ಗಂಟೆಗಳಲ್ಲಿ ಮುಗಿದು ಹೋಗಿರುತ್ತದೆ’ ಎಂಬ ಆರೋಪ ಸಾರ್ವತ್ರಿಕವಾಗಿದೆ.

‘ಆರು ವರ್ಷಗಳ ಹಿಂದೆ ಅಂದರೆ 2016ರ ಕೊನೆಯ ತಿಂಗಳಲ್ಲಿ ಮುಂಡಗೋಡ ಹಬ್ಬವನ್ನು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಆ ಕಾರ್ಯಕ್ರಮವು ನಿರೀಕ್ಷೆ ಮೀರಿ ಯಶಸ್ವಿಯಾಗಿತ್ತು’ ಎಂದು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಪ್ರಕಾಶ ಬಡಿಗೇರ ನೆನಪಿಸಿಕೊಳ್ಳುತ್ತಾರೆ.

‘ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕಲಾತಂಡಗಳ ಮೆರವಣಿಗೆ, ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಮಮಂಜರಿ ತಾಲ್ಲೂಕಿನ ಜನರನ್ನು ಖುಷಿ ಪಡಿಸಿತ್ತು. ಇಂತಹ ಉತ್ಸವಗಳನ್ನು ಪ್ರತಿ ವರ್ಷ ಮಾಡಲಾಗುವುದು ಎಂದು ಅಂದಿನ ಜನಪ್ರತಿನಿಧಿಗಳು ವೇದಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಮುಂಡಗೋಡ ಹಬ್ಬವು ಆರಂಭಗೊಂಡ ವರ್ಷವೇ ಅಂತ್ಯ ಕಂಡಂತಾಗಿದೆ’ ಎನ್ನುತ್ತಾರೆ ಅವರು.

‘ಕಾರ್ಯಕ್ರಮ ನಿರಂತರವಾಗಿರಲಿ‌’:‘ಪ್ರತಿ ವರ್ಷವೂ ತಾಲ್ಲೂಕು ಮಟ್ಟದಲ್ಲಿ ಸಾಂಸ್ಕೃತಿಕ ಉತ್ಸವಗಳು ಜರುಗಬೇಕು. ಇದರಿಂದ ತಾಲ್ಲೂಕಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸಲು, ಗ್ರಾಮೀಣ ಕಲೆಯನ್ನು ಬೆಳೆಸಲು ಅನುಕೂಲವಾಗುತ್ತದೆ. ಈ ತಾಲ್ಲೂಕಿನಲ್ಲಿಯೂ ಉತ್ತಮ ಕಲಾವಿದರಿದ್ದಾರೆ. ಸಾಂಪ್ರದಾಯಿಕ ನೃತ್ಯವನ್ನು ಪ್ರಚುರ ಪಡಿಸುವವರಿದ್ದಾರೆ. ಅಂತವರಿಗೂ ಅವಕಾಶ ಸಿಕ್ಕಂತಾಗುತ್ತದೆ. ಜನಪದ ಉತ್ಸವ, ಸಾಂಸ್ಕೃತಿಕ ಹಬ್ಬ, ಕಲಾ ಮೇಳ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ನಿರಂತರವಾಗಿರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ನಡಗೇರಿ ಅಭಿಪ್ರಾಯಪಡುತ್ತಾರೆ.

‘ಪತ್ರ ಬರೆಯಲಾಗುವುದು’:‘ಮುಂಡಗೋಡ ತಾಲ್ಲೂಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಡಿರುವ ಜನಪದ ಉತ್ಸವಗಳಿಗೆ ಇನ್ನಷ್ಟು ಪ್ರಚಾರ ನೀಡಬೇಕಿತ್ತು. ಆದರೂ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದಿನ ಸಲ ಮಾಧ್ಯಮದಲ್ಲಿ ಪ್ರಚಾರ ಮಾಡಲಾಗುವುದು. ತಾಲ್ಲೂಕಿನಲ್ಲಿ ಪ್ರತಿ ವರ್ಷ ಮುಂಡಗೋಡ ಹಬ್ಬದ ಕಾರ್ಯಕ್ರಮ ಆಯೋಜಿಸಲು, ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು’ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.