ಕಾರವಾರ: ‘ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಸಂಘಟನಾತ್ಮಕವಾಗಿ ಮಾಡಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ’ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಇಲ್ಲಿನ ಮೂರವರ್ಮ ವೇದಿಕೆ ಸಮೀಪ ರೋಟರಿ ಕ್ಲಬ್ ಸೀಸೈಡ್‌ನ ಕಾರವಾರ ಘಟಕವು ಜಿ.ಕೆ.ರಾಮ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ನೆರವಿನೊಂದಿಗೆ ಸ್ಥಾಪಿಸಿದ ಬಸ್ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರ ಎಲ್ಲ ಬೇಡಿಕೆಗಳನ್ನು ಸರ್ಕಾರವೇ ಈಡೇರಿಸಲು ಸಾಧ್ಯವಾಗದು. ಸಂಘ–ಸಂಸ್ಥೆಗಳು, ದಾನಿಗಳು ಜನೋಪಯೋಗಿಯಾಗುವ ಯೋಜನೆಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ‘ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಪಕ್ಕ ಬಿಸಿಲಿನಲ್ಲೇ ಪ್ರಯಾಣಿಕರು ನಿಂತು ಕಾಯುವ ಸಮಸ್ಯೆ ದೂರವಾಗಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಕ್ಲಬ್ ಸೀಸೈಡ್ ಕಾರವಾರ ಘಟಕದ ಅಧ್ಯಕ್ಷೆ ಅನು ಜಯಪ್ರಕಾಶ ಪಿಳ್ಳೈ, ‘ಕೆಲವು ತಿಂಗಳುಗಳಿಂದ ಮಹಿಳೆಯರು, ವಿದ್ಯಾರ್ಥಿಗಳು ಬಿಸಿಲಿನಲ್ಲಿ ಬಸ್‌ಗೆ ಕಾಯುವುದನ್ನು ನೋಡುತ್ತಿದ್ದೆವು. ಬಸ್ ತಂಗುದಾಣ ನಿರ್ಮಾಣದ ಅಗತ್ಯತೆ ಅರಿತು ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ರೋಟರಿ ಕ್ಲಬ್ ಜಿಲ್ಲಾ ಪ್ರಾಂತಪಾಲ ಅಶೋಕ ನಾಯ್ಕ, ಸಹಾಯಕ ಪ್ರಾಂತಪಾಲ ರಾಘವೇಂದ್ರ ಪ್ರಭು, ರೋಟರಿ ಕ್ಲಬ್ ಸೀಸೈಡ್ ಪದಾಧಿಕಾರಿಗಳಾದ ಸಂಧ್ಯಾ ರಾವ್, ಸುಷ್ಮಾ ಬಾಡಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.