ಶಿರಸಿ: ‘ಸರ್ಕಾರಿ ಶಾಲಾ-ಕಾಲೇಜುಗಳತ್ತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬರುವಂತೆ ಪ್ರೇರೇಪಿಸಲು ಹಾಗೂ ಸಮುದಾಯದಲ್ಲಿ ಗುಣಮಟ್ಟ ಶಿಕ್ಷಣದ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯು ನಮ್ಮ ಶಾಲೆ–ನಮ್ಮ ಜವಾಬ್ದಾರಿ ಕಾರ್ಯಕ್ರಮ ಅನುಷ್ಠಾನ ಮಾಡಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ನಮ್ಮ ಶಾಲೆ–ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಷ್ಟು ಸದೃಢವಾಗಿವೆ. ಆದರೆ, ಮಕ್ಕಳ ದಾಖಲಾತಿಯು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿಲ್ಲ. ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಸ್ನೇಹಿ ಯೋಜನೆಗಳ ಜಾರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲಾ–ಕಾಲೇಜಿಗೆ ಸೇರಿಸಬೇಕು’ ಎಂದರು.
ಸರ್ಕಾರಿ ಶಾಲೆಗಳು ಕ್ರಮೇಣ ಸುಧಾರಣೆ ಆಗುತ್ತಿವೆ. ಶಿಕ್ಷಕರ ನೇಮಿಸಲಾಗುತ್ತಿದೆ. ಇನ್ನಷ್ಟು ಬಲಪಡಿಸಲು ಕ್ರಮವಹಿಸಲಾಗುವುದು.ಭೀಮಣ್ಣ ನಾಯ್ಕ, ಶಾಸಕ
‘ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು, ರಾಗಿಮಾಲ್ಟ್, ಮಧ್ಯಾಹ್ನದ ಬಿಸಿಯೂಟ, ಅಪೌಷ್ಟಿಕತೆ–ರಕ್ತಹೀನತೆ ನಿವಾರಣೆ ಕ್ರಮ, ಗುಣಮಟ್ಟದ ಶಿಕ್ಷಣ, ಪೋತ್ಸಾಹದಾಯಕ ಯೋಜನೆಗಳ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಹಳೆಯ ವಿದ್ಯಾರ್ಥಿಗಳು, ತಾವು ಓದಿದ ಶಾಲೆ–ಕಾಲೇಜುಗಳ ಬಗ್ಗೆ ಇತರರಿಗೆ ಅಭಿಮಾನ ಮೂಡಿಸುವುದರೊಂದಿಗೆ ಅವುಗಳ ಅಭಿವೃದ್ಧಿಗೆ ನೆರವು ನೀಡಬೇಕು’ ಎಂದು ಹೇಳಿದರು.
2024–25ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ 10 ಶ್ರೇಣಿಯೊಳಗೆ ಸ್ಥಾನ ಪಡೆದ ಶಿರಸಿ, ಸಿದ್ದಾಪುರ ತಾಲ್ಲೂಕುಗಳ 65 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಡಿಡಿಪಿಐ ಪಿ. ಬಸವರಾಜ, ಪ್ರಮುಖರಾದ ವೀಣಾ ಶೆಟ್ಟಿ, ದೀಪಾ ಮಹಾಲಿಂಗಣ್ಣನವರ, ಗೀತಾ ಶೆಟ್ಟಿ, ಎಸ್.ಕೆ. ಭಾಗವತ, ಎಂ.ಎಚ್. ನಾಯ್ಕ, ಕಿರಣ ನಾಯ್ಕ, ನಾಗರಾಜ ನಾಯ್ಕ, ಬಾಲಚಂದ್ರ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.