ಯಲ್ಲಾಪುರ ತಾಲ್ಲೂಕಿನ ಅರಬೈಲ್ ಮತ್ತು ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮ ಸಂಪರ್ಕಿಸುವ, ಗಂಗಾವಳಿ ಸೇತುವೆಗೆ ನೆಲಮಟ್ಟದಲ್ಲಿ ನಿರ್ಮಿಸಲಾದ ಪಣಸಗುಳಿ ಸೇತುವೆ ಜಲಾವೃತವಾಗಿದೆ
ಯಲ್ಲಾಪುರ: ಮಂಗಳವಾರ ದಿನವಿಡೀ ಸುರಿದ ಜಡಿಮಳೆಗೆ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಗುಳ್ಳಾಪುರದಿಂದ ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಗಂಗಾವಳಿ ನದಿಗೆ ಅಡ್ಡಲಾಗಿ ನೆಲಮಟ್ಟದಲ್ಲಿ ಗುಳ್ಳಾಪುರದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯಲ್ಲಿ ಕೊಚ್ಚಿಹೋಗಿದೆ. ಗಂಗಾವಳಿಯಲ್ಲಿ ನೀರಿನ ಪ್ರಮಾಣ ಅಧಿಕವಾದ ಹಿನ್ನೆಲೆಯಲ್ಲಿ ಪಣಸಗುಳಿ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಅಲ್ಲಿ ಸಂಚಾರ ಸ್ಥಗಿತವಾಗಿದೆ.
ವಜ್ರಳ್ಳಿ ಪಂಚಾಯಿತಿಯ ವಿವಿಧೆಡೆ ಗ್ರಾಮೀಣ ರಸ್ತೆಗಳು ನೀರಿನಿಂದ ಕೊಚ್ಚಿಹೋಗಿವೆ. ಗ್ರಾಮ ಪಂಚಾಯಿತಿ ಪಕ್ಕದ ಗಟಾರದಲ್ಲಿ ಕಸಕಡ್ಡಿ ತುಂಬಿನಿಂತ ಪರಿಣಾಮ ಕೈಗಾ–ಇಳಕಲ್ ರಾಜ್ಯ ಹೆದ್ದಾರಿ 6ರಲ್ಲಿ ನೀರು ನಿಂತು, ಪಕ್ಕದ ಕಾರಂತ ಭಟ್ಟರ ಮನೆಗೆ ನುಗ್ಗಿದೆ. ದಿನನಿತ್ಯ ಸಾವಿರಾರು ವಾಹನ ಸಂಚರಿಸುವ ಮುಖ್ಯರಸ್ತೆಯ ಅಂಚಿನ ಗಟಾರವನ್ನು ನಿರ್ವಹಣೆ ಮಾಡದೇ ಇರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.