ADVERTISEMENT

ಚುರುಕುಗೊಂಡ ‘ರಾಜಕೀಯ ವಲಸೆ’

ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೈಗೊಂಡ ರಾಜಕೀಯ ಪಕ್ಷಗಳು

ಗಣಪತಿ ಹೆಗಡೆ
Published 28 ನವೆಂಬರ್ 2022, 13:30 IST
Last Updated 28 ನವೆಂಬರ್ 2022, 13:30 IST
ಬನವಾಸಿಯ ‘ಅಕ್ಕನ ಬಳಗ’ದ ಸದಸ್ಯರು ಈಚೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬನವಾಸಿಯ ‘ಅಕ್ಕನ ಬಳಗ’ದ ಸದಸ್ಯರು ಈಚೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.   

ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ತಾಲೀಮು ಆರಂಭಗೊಂಡಿದೆ. ಇದರ ಭಾಗವಾಗಿ ಪಕ್ಷ ಸೇರ್ಪಡೆ, ಪಕ್ಷಾಂತರ ಚಟುವಟಿಕೆ ಚುರುಕುಗೊಂಡಿದೆ.

ಅಧಿಕಾರದಲ್ಲಿರುವ ಪಕ್ಷದ ಜನಪ್ರತಿನಿಧಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದು ಹಳ್ಳಿಗಳಲ್ಲಿ ಸುತ್ತಾಟ ಆರಂಭಿಸಿದ್ದಾರೆ. ವಿಪಕ್ಷಗಳ ನಾಯಕರು ಸಮಾವೇಶ, ಬೂತ್ ಮಟ್ಟದ ಸಭೆ ಮೂಲಕ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯ ಜೋರಾಗಿದೆ. ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವತ್ತ ಮುಖಂಡರು ದೃಷ್ಟಿ ನೆಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಈ ವಿಚಾರದಲ್ಲಿ ಜೆಡಿಎಸ್ ಮುನ್ನೆಲೆಗೆ ಬರಲು ತಡಕಾಡುತ್ತಿದೆ.

ADVERTISEMENT

ಪಕ್ಷಾಂತರ ಪ್ರಕ್ರಿಯೆಯಲ್ಲಿ ಸದ್ಯ ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದೆ. ಸ್ಥಳೀಯ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ನೂರಾರು ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಗ್ರಾಮಗಳ ಭೇಟಿ ವೇಳೆ ಕಾರ್ಯಕರ್ತರ ಸೇರ್ಪಡೆಗೆ ಆದ್ಯತೆ ಕೊಡಲಾಗುತ್ತಿದೆ.

ಪಕ್ಷ ಸೇರ್ಪಡೆ ವಿಚಾರದಲ್ಲಿ ಶಿರಸಿ, ಕುಮಟಾ ಕ್ಷೇತ್ರದಲ್ಲೂ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಕಾರ್ಯಕರ್ತರನ್ನು ಕಾಂಗ್ರೆಸ್ ಸೆಳೆಯುತ್ತಿದ್ದರೆ, ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡವರನ್ನು ಬಿಜೆಪಿ ತನ್ನತ್ತ ಕರೆತರುವ ಕೆಲಸ ಮಾಡುತ್ತಿದೆ.

‘ಚುನಾವಣೆಗಳು ಸಮೀಪಿಸಿದಾಗ ಪಕ್ಷಾಂತರ ಪ್ರಕ್ರಿಯೆ ಸಹಜವಾಗಿ ನಡೆಯುತ್ತವೆ. ಆದರೆ ಇವು ಮತದಾರರ ಮೇಲೆ ಪರಿಣಾಮ ಬೀರುವುದು ಕಷ್ಟ. ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರಲು ಪ್ರಯತ್ನಿಸಿದ ಬಳಿಕ ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕೆಲಸ ಜೋರಾಗಿದೆ. ಇದು ಬಿಜೆಪಿಯವರಿಗೆ ಭಯ ಹುಟ್ಟಿದೆ ಎಂಬುದಕ್ಕೆ ನಿದರ್ಶನ’ ಎಂದು ಬನವಾಸಿ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ಮುಖಂಡರ ಪಕ್ಷಾಂತರ:

ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವುದು ಒಂದೆಡೆ ಜೋರಾಗಿದ್ದರೆ, ಇನ್ನೊಂದೆಡೆ ಪ್ರಭಾವಿ ಮುಖಂಡರು ಪಕ್ಷಾಂತರ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿಯಿಂದ ಈ ಹಿಂದೆ ಮುಂಡಗೋಡ ಕ್ಷೇತ್ರದ ಶಾಸಕರಾಗಿದ್ದ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರುವ ಹಂತದಲ್ಲಿದ್ದಾರೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಬಿ.ಆರ್.ನಾಯ್ಕ ಈಚೆಗಷ್ಟೆ ಕಾಂಗ್ರೆಸ್‍‍ಗೆ ಸೇರ್ಪಡೆಗೊಂಡಿದ್ದಾರೆ. ಜಿಲ್ಲೆಯ ಕೆಲವು ಕ್ಷೇತ್ರದ ಮಾಜಿ ಶಾಸಕರು ಈ ಬಾರಿ ಪಕ್ಷ ಬದಲಿಸಿ ಚುನಾವಣೆಗೆ ಸ್ಪರ್ಧಿಸಲು ತಯಾರಿಯಲ್ಲಿರುವ ವದಂತಿ ಹಬ್ಬಿದೆ.

------------------

ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ, ಪಕ್ಷದ ಸಿದ್ಧಾಂತ ಒಪ್ಪಿ ಸ್ವಯಂ ಪ್ರೇರಿತರಾಗಿ ನೂರಾರು ಜನರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

ಶಿವರಾಮ ಹೆಬ್ಬಾರ

ಕಾರ್ಮಿಕ ಸಚಿವ

------------------

ಬಿಜೆಪಿ ದುರಾಡಳಿತದಿಂದ ಬೇಸರಗೊಂಡಿರುವ ಜನರು ಕಾಂಗ್ರೆಸ್‍ನತ್ತ ಒಲವು ತೋರುತ್ತಿದ್ದಾರೆ. ಒಂದೆರಡು ತಿಂಗಳಲ್ಲಿ ರಾಜಕೀಯ ಚಿತ್ರಣ ಬದಲಾಗಲಿದೆ.

ಭೀಮಣ್ಣ ನಾಯ್ಕ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.