ADVERTISEMENT

ವಿಶೇಷ ಕುಶಲಿಗಳ ಕೈಚಳಕ

‘ಚೇತನಾ’ದಲ್ಲಿ ಆರೋಗ್ಯ ಸುಧಾರಣೆ, ಆರ್ಥಿಕ ಸ್ವಾವಲಂಬನೆಗೆ ‘ಔದ್ಯೋಗಿಕ ಚಿಕಿತ್ಸೆ’

ಗಣಪತಿ ಹೆಗಡೆ
Published 7 ಆಗಸ್ಟ್ 2022, 7:41 IST
Last Updated 7 ಆಗಸ್ಟ್ 2022, 7:41 IST
ಶಿರಸಿಯ ಚೇತನಾ ಕೇಂದ್ರದಲ್ಲಿ ಪತ್ರಿಕೆಗಳಿಂದ ಪೊಟ್ಟಣ ಸಿದ್ಧಪಡಿಸುವಲ್ಲಿ ನಿರತರಾಗಿರುವ ಬುದ್ಧಿಮಾಂದ್ಯ ಯುವಕ, ಯುವತಿಯರು
ಶಿರಸಿಯ ಚೇತನಾ ಕೇಂದ್ರದಲ್ಲಿ ಪತ್ರಿಕೆಗಳಿಂದ ಪೊಟ್ಟಣ ಸಿದ್ಧಪಡಿಸುವಲ್ಲಿ ನಿರತರಾಗಿರುವ ಬುದ್ಧಿಮಾಂದ್ಯ ಯುವಕ, ಯುವತಿಯರು   

ಶಿರಸಿ: ದೈಹಿಕ ಮತ್ತು ಮಾನಸಿಕ ನ್ಯೂನತೆಗಳಿದ್ದರೂ ಹತ್ತಾರು ಯುವಕರು, ಯುವತಿಯರು ಅದನ್ನೆಲ್ಲ ಮರೆತು ವಿವಿಧ ಬಗೆಯ ವಸ್ತುಗಳನ್ನು ಸಿದ್ಧಪಡಿಸುತ್ತಾರೆ. ಈ ವಸ್ತುಗಳಿಗೆ ಸ್ಥಳೀಯವಾಗಿ ಮಾತ್ರವಲ್ಲದೆ, ದೂರದ ಬೆಂಗಳೂರಿನಲ್ಲೂ ಬೇಡಿಕೆ ಇದೆ.

ಬುದ್ಧಿಮಾಂದ್ಯ ಯುವಕರನ್ನು ಕೌಶಲಯುಕ್ತ ಕಾರ್ಮಿಕರಾಗಿ ಮಾರ್ಪಡಿಸಿರುವುದರ ಹಿಂದೆ ಇಲ್ಲಿನ ‘ಪ್ರಶಾಂತಿ ಫೌಂಡೇಷನ್’ ಶ್ರಮವಿದೆ. ಬನವಾಸಿ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ‘ಚೇತನ’ ಹೆಸರಿನ ಕರಕುಶಲ ವಸ್ತು ತಯಾರಿಕಾ ಘಟಕವನ್ನು ಸಂಸ್ಥೆ ಹದಿನೆಂಟು ವರ್ಷದಿಂದ ಮುನ್ನಡೆಸುತ್ತಿದೆ. ಇಲ್ಲಿ 25 ರಷ್ಟು ಬುದ್ಧಿಮಾಂದ್ಯ ಯುವಕರೇ ಕೆಲಸ ನಿರ್ವಹಿಸುತ್ತಿದ್ದಾರೆ.

15ಕ್ಕೂ ಹೆಚ್ಚು ಕಾರ್ಮಿಕರು ದಿನಪತ್ರಿಕೆಗಳಿಂದ ಪೊಟ್ಟಣ ಸಿದ್ಧಪಡಿಸುತ್ತಿದ್ದಾರೆ. ಕೆಲವು ಯುವತಿಯರು ಪೇಪರ್ ಸ್ಟ್ಯಾಂಡ್, ಪೇಪರ್ ಪೆನ್ ತಯಾರಿಸುತ್ತಾರೆ. ದಶಕಗಳಿಂದಲೂ ಲಕ್ಷಾಂತರ ಕಾಗದ ಪೊಟ್ಟಣ ಸಿದ್ಧಪಡಿಸಿದ್ದು ಇವೆಲ್ಲವನ್ನೂ ಸ್ಥಳೀಯ ಔಷಧ, ಕಿರಾಣಿ ಮಳಿಗೆಗಳಿಗೆ ಸಂಸ್ಥೆ ಪೂರೈಸುತ್ತಿದೆ.

ADVERTISEMENT

ಇಲ್ಲಿ ತಯಾರಾಗುವ ಉಡುಗೊರೆ ಪೊಟ್ಟಣ, ಬ್ಯಾಗ್, ಪೆನ್, ಮುಂತಾದ ಕರಕುಶಲ ಉತ್ಪನ್ನಗಳು ಬೆಂಗಳೂರಿನ ಹಲವೆಡೆ ಮಾರಾಟ ಕಾಣುತ್ತಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಕೆಲಸ ನಿರ್ವಹಿಸುವ ಬುದ್ಧಿಮಾಂದ್ಯ ಯುವಕ, ಯುವತಿಯರಿಗೆ ಸಂಸ್ಥೆ ಮಾಸಿಕ ವೇತನವನ್ನೂ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದಿಂದ ಬುದ್ಧಿಮಾಂದ್ಯ ಕಾರ್ಮಿಕರನ್ನು ಬಸ್ ಮೂಲಕ ಕರೆತರಲಾಗುತ್ತಿದೆ.

‘ದೈಹಿಕ ಮತ್ತು ಮಾನಸಿಕವಾಗಿ ಸೂಕ್ತ ಬೆಳವಣಿಗೆ ಕಾಣದವರಿಗೆ ‘ಔದ್ಯೋಗಿಕ ಚಿಕಿತ್ಸೆ’ ಮೂಲಕ ಆರೋಗ್ಯ ಸುಧಾರಿಸುವ ಕೆಲಸ ಮಾಡಲು ಇಂತಹ ಯೋಜನೆಯನ್ನು ಆರಂಭಿಸಲಾಯಿತು. ಹದಿನೆಂಟು ವರ್ಷದಲ್ಲಿ ಹಲವಾರು ಜನರು ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನೂ ಕಂಡುಕೊಂಡಿದ್ದಾರೆ. ಜೀವನದಲ್ಲಿ ಶಿಸ್ತು ಬೆಳೆಸಿಕೊಂಡಿದ್ದಾರೆ’ ಎನ್ನುತ್ತಾರೆ ಬುದ್ಧಿಮಾಂದ್ಯ ಕಾರ್ಮಿಕರಿಗೆ ಆರೋಗ್ಯ ಸಲಹೆ ನೀಡುತ್ತಿರುವ ಡಾ.ಮಾಲಾ ಗಿರಿಧರ್.

‘ಮಹಾನಗರಗಳಲ್ಲಿರುವ ಕೆಲವು ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಇಂತಹ ಚಿಕಿತ್ಸೆ ಇದೆ. ಅದನ್ನು ಸಣ್ಣ ನಗರದಲ್ಲಿ ಕಾರ್ಯರೂಪಕ್ಕೆ ತರುವುದು ಸವಾಲಿನ ಸಂಗತಿ. ಆದರೆ ಇಲ್ಲಿ ಅನುಕೂಲಕರ ವಾತಾವರಣ ಲಭಿಸಿದ್ದರಿಂದ ಬುದ್ಧಿಮಾಂದ್ಯರನ್ನು ಕುಶಲಕರ್ಮಿಗಳಾಗಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು. ಪೊಟ್ಟಣ ತಯಾರಿಕೆಗೆ ದಿನಪತ್ರಿಕೆಗಳನ್ನು ನೀಡಬಯಸುವವರು 98458 69384 ಸಂಖ್ಯೆಗೆ ಸಂಪರ್ಕಿಸಬಹುದು.

ನಿತ್ಯವೂ ಮನೋರಂಜನೆ:

‘ಚೇತನಾ’ದಲ್ಲಿ ಕೆಲಸ ನಿರ್ವಹಿಸುವ ಬುದ್ಧಿಮಾಂದ್ಯರಿಗೆ ನಿತ್ಯ ಸಂಜೆ ಕೆಲಸ ಮುಗಿದ ಬಳಿಕ ಸಂಗೀತ, ನೃತ್ಯ ಏರ್ಪಡಿಸಲಾಗುತ್ತದೆ. ಕೆಲಸದ ಒತ್ತಡವನ್ನೆಲ್ಲ ಮರೆತು ಉಲ್ಲಾಸಿತರಾದ ಬಳಿಕ ಮನೆಗಳಿಗೆ ಕಳುಹಿಸಿಕೊಡಲಾಗುತ್ತದೆ.

‘ತಮ್ಮದೇ ಮನಸ್ಥಿತಿಯ ಜನರು ಸಿಕ್ಕ ಬಳಿಕ ಬುದ್ಧಿಮಾಂದ್ಯರು ಪರಸ್ಪರ ಸಂತಸದಿಂದ ಕಾಲಕಳೆಯುತ್ತಾರೆ. ದಿನದ ಬಹುಪಾಲು ಕೆಲಸ, ಕೆಲಹೊತ್ತು ಮನರಂಜನೆ ಜತೆಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಇದರಿಂದ ಹಲವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರೆಲ್ಲ ಆರ್ಥಿಕವಾಗಿಯೂ ಕುಟುಂಬಕ್ಕೆ ಆಧಾರವಾಗಿ ನಿಂತಿದ್ದಾರೆ’ ಎನ್ನುತ್ತಾರೆ ಡಾ.ಮಾಲಾ ಗಿರಿಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.