ADVERTISEMENT

‘ಕೊರೊನಾ ಸೇನಾನಿ’ಗಳಿಗೆ ‘ಪ್ರಜಾವಾಣಿ’ಯಿಂದ ಗೌರವ

ವಿವಿಧ ವಿಭಾಗಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 13:26 IST
Last Updated 17 ಫೆಬ್ರುವರಿ 2021, 13:26 IST
ಕಾರವಾರದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ ಕೊರೊನಾ ಸೇನಾನಿಗಳು 2021’ ಪ್ರಶಸ್ತಿಯನ್ನು ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಡಾ. ಕೆ. ಹರೀಶಕುಮಾರ್ ಪ್ರದಾನ ಮಾಡಿದರು. ‘ಕ್ರಿಮ್ಸ್’ ನಿರ್ದೇಶಕ ಡಾ. ಗಜಾನನ ನಾಯಕ, ಪ್ರಶಸ್ತಿ ಪುರಸ್ಕೃತರಾದ ಲಾಗ್ಫಾ ಸಿರಿಂಗ್, ಪಾಂಡುರಂಗ ಸ್ವಾಮಿ, ಗೌರೀಶ ನಾಯ್ಕ ಮತ್ತು ಮಂಜುನಾಥ ತಿಪ್ಪಣ್ಣ ಹರಿಜನ ಇದ್ದಾರೆ
ಕಾರವಾರದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ ಕೊರೊನಾ ಸೇನಾನಿಗಳು 2021’ ಪ್ರಶಸ್ತಿಯನ್ನು ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಡಾ. ಕೆ. ಹರೀಶಕುಮಾರ್ ಪ್ರದಾನ ಮಾಡಿದರು. ‘ಕ್ರಿಮ್ಸ್’ ನಿರ್ದೇಶಕ ಡಾ. ಗಜಾನನ ನಾಯಕ, ಪ್ರಶಸ್ತಿ ಪುರಸ್ಕೃತರಾದ ಲಾಗ್ಫಾ ಸಿರಿಂಗ್, ಪಾಂಡುರಂಗ ಸ್ವಾಮಿ, ಗೌರೀಶ ನಾಯ್ಕ ಮತ್ತು ಮಂಜುನಾಥ ತಿಪ್ಪಣ್ಣ ಹರಿಜನ ಇದ್ದಾರೆ   

ಕಾರವಾರ: ಇವರು ಜಿಲ್ಲೆಯಲ್ಲಿ ವರ್ಷದ ಹಿಂದೆ ಕೋವಿಡ್ ಪ್ರಕರಣಗಳು ದೃಢಪಡಲು ಆರಂಭವಾದಾಗ ಧೃತಿಗೆಡದೇ ಸಮಾಜದ ಸೇವೆ ಮಾಡಿದವರು. ಆತಂಕದಲ್ಲಿದ್ದ ಜನರಿಗೆ ಸಾಂತ್ವನ ಹೇಳುತ್ತ, ಅಸಹಾಯಕರ ನೆರವಿಗೆ ಧಾವಿಸಿದವರು.

ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲೂ ಯಾವುದೇ ಅಳುಕಿಲ್ಲದೇ ತಮ್ಮಿಂದಾದ ಸಹಾಯವನ್ನು ಮಾಡಿದವರು ಇವರು. ಈ ರೀತಿ ಪರೋಪಕಾರದ ಕಾರ್ಯಗಳನ್ನು ಮಾಡಿದವರಿಗೆ ‘ಪ್ರಜಾವಾಣಿ ಕೊರೊನಾ ಸೇನಾನಿಗಳು 2021’ ಪ್ರಶಸ್ತಿಯನ್ನು ನಗರದ ಕನ್ನಡ ಭವನದಲ್ಲಿ ಬುಧವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ (ವರ್ಗಾವಣೆಯಾದ ಜಿಲ್ಲಾಧಿಕಾರಿ) ಡಾ. ಕೆ. ಹರೀಶಕುಮಾರ್, ಸೇನಾನಿಗಳ ಕಾರ್ಯ ಮತ್ತು ಅವರನ್ನು ಗುರುತಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಈ ಜಿಲ್ಲೆಯಲ್ಲಿ ಜನ ಬಹಳ ಪ್ರಬುದ್ಧರು. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಸರ್ಕಾರ ನೀಡಿದ ಸೂಚನೆಗಳನ್ನು ಅರ್ಥ ಮಾಡಿಕೊಂಡು ಪಾಲಿಸಿದರು. ಆಡಳಿತದ ಭಾವನೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಧ್ಯಮದಿಂದ ಆಯಿತು’ ಎಂದರು.

‘ಕೋವಿಡ್ ನಮ್ಮಲ್ಲಿ ಖಂಡಿತ ಬದಲಾವಣೆ ತಂದಿದೆ. ಈ ಕಾರ್ಯಕ್ರಮದಲ್ಲಿ ಗುರುತಿಸಿದವರ ಮಾದರಿಯಲ್ಲೇ ಸಮಾಜದ ಎಲ್ಲರೂ ಗುರುತಿಸಿಕೊಂಡರೆ ಇಂಥ ಅನಾಹುತಗಳು ಬಂದಾಗ ಸಮರ್ಥವಾಗಿ ಎದುರಿಸಲು ಸಾಧ್ಯವಿದೆ. ನಮಗಾಗಿ ಬದುಕುತ್ತಾ ಇತರರಿಗೆ ಸೇವೆ ನೀಡಿದಾಗ ಹೆಚ್ಚು ನೆಮ್ಮದಿ ಕೊಡುತ್ತದೆ. ಇಲ್ಲಿ ಸನ್ಮಾನಿತರು ಅಂಥವರ ಸಾಲಿನಲ್ಲಿದ್ದಾರೆ’ ಎಂದು ಶ್ಲಾಘಿಸಿದರು.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ ಮಾತನಾಡಿ, ‘ಕೋವಿಡ್ ಮಾನವೀಯ ಸಂಬಂಧಗಳನ್ನು ಪುನಃ ವಿಚಾರ ಮಾಡುವಂಥ ಸಂದರ್ಭ ತಂದಿದೆ. ಆಗ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರೇ ಹಿಂದೇಟು ಹಾಕಿದ್ದರು. ಆದರೆ, ಬಳಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜನರ ಆರೈಕೆ ಮಾಡಿದರು’ ಎಂದು ಹೆಮ್ಮೆಯಿಂದ ಹೇಳಿದರು.

‘ಕೋವಿಡ್ ಆರಂಭದ ದಿನಗಳಲ್ಲಿ ಸೋಂಕಿತರಿಗೆ ಸೀಬರ್ಡ್ ನೌಕಾನೆಲೆಯ ಐ.ಎನ್.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ನಮ್ಮ ಸಂಸ್ಥೆಯ ವೈದ್ಯರೇ ಚಿಕಿತ್ಸೆ ನೀಡಿದರು. ಬಳಿಕ ನಮ್ಮಲ್ಲೇ ಜಿಲ್ಲಾಡಳಿತ ಆಸ್ಪತ್ರೆ ಸಿದ್ಧಪಡಿಸಿತು. ಅಂದಿನಿಂದ ಇಂದಿನವರೆಗೆ ಸಂಸ್ಥೆಯ ಆರ್‌.ಟಿ.ಪಿ.ಸಿ.ಆರ್ ಪ್ರಯೋಗಾಲಯದಲ್ಲಿ 2.50 ಲಕ್ಷ ಗಂಟಲುದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ 972 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಒಬ್ಬರೇ ಇದ್ದಾರೆ’ ಎಂದು ತಿಳಿಸಿದರು.

‘ಕಳವಳದ ನಡುವೆ ಸೇವೆ’

ಸನ್ಮಾನಿತ ಕೊರೊನಾ ಸೇನಾನಿಗಳ ಪರವಾಗಿ ಮಾತನಾಡಿದ ಶಿರಸಿಯ ಗೌರೀಶ ನಾಯ್ಕ, ‘ಕೋವಿಡ್‌ನ ಆರಂಭದ ದಿನಗಳಲ್ಲಿ ಔಷಧ, ಆಹಾರ ಧಾನ್ಯ, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ನೀಡಲು ಪಾಸ್ ಪಡೆದುಕೊಂಡೆವು. ಆರಂಭದಲ್ಲಿ ನಮ್ಮ ತಂಡದಲ್ಲಿ ನಾಲ್ವರು ಮಾತ್ರ ಇದ್ದೆವು. ಸ್ವಂತ ಹಣದಿಂದ ಆಹಾರ ಪದಾರ್ಥಗಳ 10 ಪೊಟ್ಟಣಗಳನ್ನು ಕೊಟ್ಟಿದ್ದೆವು. ಅದರಿಂದ ಪ್ರೇರಣೆಗೊಂಡ ಮತ್ತಷ್ಟು ಜನ ಸೇರಿಕೊಂಡು 140 ಪೊಟ್ಟಣಗಳನ್ನು ಹಂಚಿದೆವು’ ಎಂದು ಸ್ಮರಿಸಿದರು.

‘ಎರಡನೇ ಮನೆಯೆಂಬ ಹೆಮ್ಮೆ’

ಪ‍್ರಶಸ್ತಿ ಸ್ವೀಕರಿಸಿದ ಮುಂಡಗೋಡದ ಡೊಗ್ಲಿಂಗ್ ಸೆಟ್ಲ್‌ಮೆಂಟ್ ಅಧ್ಯಕ್ಷ ಲಾಗ್ಫಾ ಸಿರಿಂಗ್ ಮಾತನಾಡಿ, ‘ನಮ್ಮ ಶಿಬಿರದಲ್ಲೇ 10,300 ರ‍್ಯಾಪಿಡ್ ಟೆಸ್ಟ್ ಮಾಡಲಾಯಿತು. ಒಟ್ಟು 810 ಮಂದಿಗೆ ಕೋವಿಡ್ ದೃಢಪಟ್ಟು, 10 ಮಂದಿ ಮೃತಪಟ್ಟರು. ಉಳಿದ ಎಲ್ಲರೂ ಗುಣಮುಖರಾಗಿದ್ದಾರೆ. ಕರ್ನಾಟಕವು ನಮಗೆ ಎರಡನೇ ಮನೆ. ನಮ್ಮ ಸಂಕಷ್ಟದ ನಡುವೆಯೂ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗಿದೆ. ಇಲ್ಲಿನ ಸರ್ಕಾರ, ಜಿಲ್ಲಾಧಿಕಾರಿ ಬಹಳ ಸಹಕಾರ ನೀಡಿದ್ದಾರೆ’ ಎಂದರು.

ಪ್ರಶಸ್ತಿ ಪುರಸ್ಕೃತರು

ಹೆಸರು;ವಿಭಾಗ

ಡಾ.ರಾಜು ತಳವಾರ್;ವೈದ್ಯ, ‘ಕ್ರಿಮ್ಸ್’ ಕಾರವಾರ

ಗೌರೀಶ ನಾಯ್ಕ ಮತ್ತು ತಂಡ;ಸಮಾಜಸೇವೆ, ಶಿರಸಿ

ಪಾಂಡುರಂಗ ಎಂ.ಸ್ವಾಮಿ;ಸಮಾಜಸೇವೆ, ಸಿದ್ದಾಪುರ

ಮಂಜುನಾಥ ತಿಪ್ಪಣ್ಣ ಹರಿಜನ;ಪ.ಪಂ ಪೌರಸಿಬ್ಬಂದಿ, ಮುಂಡಗೋಡ

ಮುಂಡಗೋಡ ಟೆಬೆಟನ್ ಶಿಬಿರ;ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.