ADVERTISEMENT

ಕಾಕಡತಳೆ ಕೆರೆಗೆ ಕಸ ಎಸೆಯುವುದು ನಿಲ್ಲಲಿ: ಗಜೇಂದ್ರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:11 IST
Last Updated 16 ಏಪ್ರಿಲ್ 2025, 14:11 IST
ಗಜೇಂದ್ರ ನಾಯ್ಕ
ಗಜೇಂದ್ರ ನಾಯ್ಕ   

ಕಾರವಾರ: ‘ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕದ ಕಸವನ್ನು ಕಾಕಡತಳೆ ಕೆರೆಯಲ್ಲಿ ಸುರಿಯುತ್ತಿರುವುದನ್ನು ಏ.26ರ ಒಳಗೆ ಸ್ಥಗಿತಗೊಳಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಸನಾತನ ಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಗಜೇಂದ್ರ ನಾಯ್ಕ ಎಚ್ಚರಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆರೆಯ ಪಕ್ಕದಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಮೀನು ಮಾರುಕಟ್ಟೆಗಳಿವೆ. ಜನ ವಸತಿ ಪ್ರದೇಶವೂ ಇದೆ. ಇಂತಹ ಸ್ಥಳದಲ್ಲಿ ಕಸ ಹಾಕುತ್ತಿರುವುದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಹಸಿ ಕಸವನ್ನು ರಾಶಿಗಟ್ಟಲೆ ಸುರಿಯಲಾಗುತ್ತಿದ್ದು, ಒಣಕಸಗಳಿಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಸಮಸ್ಯೆ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ. ಕೆರೆಯ ಸಮೀಪದಲ್ಲೇ ಅಪಾರ್ಟಮೆಂಟ್ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಜನರ ಹಿತ ಕಡೆಗಣಿಸಲಾಗಿದೆ. ವಿಲೇವಾರಿ ಘಟಕದ ಯಂತ್ರವು ಸರಿಯಾಗಿಲ್ಲ. ವಾರದಲ್ಲಿ ನಾಲ್ಕೈದು ದಿನ ಕೆಲಸ ಸರಿಯಾಗಿ ಮಾಡದ ಕಾರಣ ಹಸಿ ಕಸಗಳನ್ನು ಕೆರೆಗೆ ಎಸೆಯಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಘನ ತ್ಯಾಜ್ಯ ವಿಲೇವಾರಿ ಘಟಕವನ್ನೇ ಬೇರೆ ಕಡೆಗೆ ಸ್ಥಳಾಂತರಿಸಬೇಕು’ ಎಂದೂ ಒತ್ತಾಯಿಸಿದರು.

ಚಿತ್ತಾಕುಲ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ರಾಣೆ, ಸುನೀಲ ಐಗಳ, ಪುರುಷೋತ್ತಮ ರಾಣೆ, ಗುರು ಸಾವಂತ, ಗೋವಿಂದ ರಾಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.