ADVERTISEMENT

ಕಾಸರಕೋಡ ಟೊಂಕ ಬಂದರು ಪ್ರದೇಶದಲ್ಲಿ ಇಂದಿನಿಂದ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 4:46 IST
Last Updated 29 ಮಾರ್ಚ್ 2024, 4:46 IST
<div class="paragraphs"><p>ಹೊನ್ನಾವರದ ಕಾಸರಕೋಡ ಟೊಂಕ&nbsp;ಪ್ರದೇಶ</p></div>

ಹೊನ್ನಾವರದ ಕಾಸರಕೋಡ ಟೊಂಕ ಪ್ರದೇಶ

   

(ಸಂಗ್ರಹ ಚಿತ್ರ)

ಕಾರವಾರ: ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕ ಪ್ರದೇಶದಲ್ಲಿ ಬಂದರು ಕಾಮಗಾರಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 29 ರಿಂದ ಏಪ್ರಿಲ್ 5ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.

ADVERTISEMENT

ಬಂದರು ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಬೆದರಿಕೆ ಹಾಕುವುದು, ಕಾಮಗಾರಿ ಉಪಕರಣಗಳಿಗೆ ಹಾನಿ ಉಂಟು ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಬಂದರು ಯೋಜನೆ ನಡೆಯುವ ಪ್ರದೇಶ ಸೇರಿದಂತೆ ಅದರ ಸುತ್ತಮುತ್ತಲಿನ ಸ್ಥಳದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ ಅವಧಿಯಲ್ಲಿ ಗರಿಷ್ಠ ಐದು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಂದೆಡೆ ಧರಣಿ ಹಾಗೂ ಪ್ರತಿಭಟನೆ ಉದ್ದೇಶಕ್ಕೆ ಸೇರುವುದನ್ನು ಹಾಗೂ ಸಾರ್ವಜನಕರಿಗೆ ತೊಂದರೆಯುಂಟಾಗುವಂತೆ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಆಯುಧ, ಸ್ಫೋಟಕ, ಕ್ಷಾರ ಪದಾರ್ಥಗಳನ್ನು ತರುವುದು, ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾಸರಕೋಡ ಟೊಂಕದಲ್ಲಿ ಬಂದರು ನಿರ್ಮಿಸಲು ಖಾಸಗಿ ಕಂಪನಿಗೆ ಲೀಸ್ ಆಧಾರದಲ್ಲಿ ಜಾಗ ನೀಡಲಾಗಿದೆ. ಬಂದರು ಯೋಜನೆಗೆ ದಶಕದಿಂದಲೂ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಮೀನುಗಾರರು ಯೋಜನೆ ಜಾರಿಗೆ ತರದಂತೆ ಒತ್ತಾಯಿಸಿದ್ದರು.

'ಯೋಜನೆ ಈಗಾಗಲೆ ವಿಳಂಬವಾಗಿದ್ದು ಸರ್ಕಾರ ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ. ಬಂದರು ಯೋಜನೆ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಯಲಿದ್ದು ಇದಕ್ಕೆ ಅಡ್ಡಿಪಡಿಸಬಾರದು' ಎಂದು ಜಿಲ್ಲಾಧಿಕಾರಿ ಸ್ಥಳೀಯರಿಗೆ ಎಚ್ಚರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.