ADVERTISEMENT

ನಿರ್ಜೀವವಾದ ಮೇವು ಪ್ರೊಟೀನ್ ಪಾರ್ಕ್

ಮೊಲ ಸಾಕಾಣಿಕೆ ಕೇಂದ್ರದಲ್ಲಿ ಬೆಳೆಸಿದ್ದ ಗಿಡಗಳು ನಿರುಪಯುಕ್ತ

ಸಂಧ್ಯಾ ಹೆಗಡೆ
Published 20 ಮೇ 2019, 19:37 IST
Last Updated 20 ಮೇ 2019, 19:37 IST
ಬಯಲಿನಂತೆ ಗೋಚರಿಸುವ ಪ್ರೊಟೀನ್ ಪಾರ್ಕ್‌
ಬಯಲಿನಂತೆ ಗೋಚರಿಸುವ ಪ್ರೊಟೀನ್ ಪಾರ್ಕ್‌   

ಶಿರಸಿ: ಜಾನುವಾರುಗಳಿಗೆ ಹಸಿರು ಮೇವು ಹಾಗೂ ಅವಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಲು ನಗರದ ಹೊರವಲಯದಲ್ಲಿ ಪ್ರಾರಂಭಿಸಿದ್ದ ಪ್ರೊಟೀನ್ ಪಾರ್ಕ್ ನೀರು ಹಾಗೂ ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿದೆ.

ಪಶುಸಂಗೋಪನಾ ಇಲಾಖೆಯ ಅಡಿಯಲ್ಲಿರುವ ಮೊಲ ಸಾಕಾಣಿಕಾ ಕೇಂದ್ರ ಆವರಣದಲ್ಲಿ ನಾಟಿ ಮಾಡಿದ್ದ ಗಿಡಗಳೆಲ್ಲವೂ ಒಣಗಿ ನಿಂತಿವೆ. ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಪಾರ್ಕ್ ಬಟಾಬಯಲಿನಂತೆ ಗೋಚರಿಸುತ್ತಿದೆ.

ಜಾನುವಾರುಗಳಿಗೆ ನಿರಂತರ ಹಸಿರು ಮೇವು ದೊರೆಯಬೇಕು ಮತ್ತು ಬೇಸಿಗೆಯಲ್ಲಿ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆವಹಿಸಲು ರೈತರಿಗೆ ಮಾರ್ಗದರ್ಶಿಯಾಗಿ ಈ ಪ್ರೊಟೀನ್ ಪಾರ್ಕ್ ಅನ್ನು 2017ರಲ್ಲಿ ಪ್ರಾರಂಭಿಸಲಾಗಿತ್ತು. 3.5 ಎಕರೆ ವಿಶಾಲ ಜಾಗದಲ್ಲಿ, ₹ 5 ಲಕ್ಷ ವೆಚ್ಚದಲ್ಲಿ ಕ್ಯಾಲಿಯಾಂಡ್ರಾ, ಹೆಬ್ಬೇವು, ಹಲಸು, ನೆಲ್ಲಿ ಮೊದಲಾದ ಜಾತಿಯ 500ರಷ್ಟು ಗಿಡಗಳನ್ನು ನಾಟಿ ಮಾಡಲಾಗಿತ್ತು. ಆದರೆ, ಈಗ ಅಲ್ಲಿ ಒಣಗಿ ನಿಂತಿರುವ ಗಿಡಗಳು, ಸ್ಥಳಕ್ಕೆ ಭೇಟಿ ನೀಡುವ ರೈತರಲ್ಲಿ ನಿರಾಸೆ ಮೂಡಿಸುತ್ತಿವೆ.

ADVERTISEMENT

‘ಕಾಡು ಕಣಗಲ, ಹೊನ್ನೆ, ಅಗಸೆ, ನುಗ್ಗೆ, ಹಿಪ್ಪುನೇರಳೆ, ದಡಸಲು ಹಾಗೂ ಇತರ ಹಸಿರು ಮೇವನ್ನು ಬೆಳೆಸಲು ಕಾರ್ಯಯೋಜನೆ ರೂಪಿತವಾಗಿತ್ತು. ನಾಟಿ ಮಾಡಿದ ಹಸಿರು ಮೇವು ಐದಾರು ತಿಂಗಳುಗಳಲ್ಲಿ ಕಟಾವಿಗೆ ಬರಬೇಕಾಗಿತ್ತು. ಆದರೆ, ಒಮ್ಮೆಯೂ ಇವುಗಳ ಕಟಾವು ನಡೆದಿಲ್ಲ. ನಾಟಿ ಮಾಡಿದ ಮೇಲೆ ಯಾವುದೇ ನಿರ್ವಹಣೆ ಮಾಡದ ಕಾರಣ, ಬಹುತೇಕ ಗಿಡಗಳು ನೀರಿಲ್ಲದೇ ಸತ್ತು ಹೋಗಿವೆ’ ಎನ್ನುತ್ತಾರೆ ಸ್ಥಳೀಯ ಸಂತೋಷ ನಾಯ್ಕ.

‘ಪಾರ್ಕ್ ಆರಂಭಿಸುವಾಗ ಹಸಿರು ಮೇವು ಗಿಡಗಳ ಬೀಜ ಸಂಗ್ರಹಣೆಯ ಜತೆಗೆ ಬರ ಪರಿಸ್ಥಿತಿ ಎದುರಾದರೆ ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯ­ವುಳ್ಳ ರೈತರಿಗೆ ಮೇವು ಒದಗಿಸಲು ಇಲಾಖೆ ನಿರ್ಧರಿಸಿತ್ತು. ಪಾರ್ಕ್ ನಿರ್ಮಾಣ­ದಿಂದ ವರ್ಷವಿಡೀ ಹಸಿರು ಮೇವು ಪಡೆಯಬಹುದು. ಪಶುಗಳಿಗೆ ಪ್ರೊಟೀನ್ ಹಾಗೂ ಖನಿಜಯುಕ್ತ ಆಹಾರ ನೀಡಬಹುದು. ಇದು ಹೈನೋದ್ಯಮಕ್ಕೆ ಪೂರಕವಾಗಲಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು’ ಎಂದು ಅವರು ದೂರಿದರು.

ಈ ಕುರಿತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆರ್‌.ಜಿ.ಹೆಗಡೆ ಅವರನ್ನು ಸಂಪರ್ಕಿಸಿದಾಗ, ‘ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿ ಪ್ರೊಟೀನ್ ಪಾರ್ಕ್‌ನಲ್ಲಿ ಗಿಡಗಳನ್ನು ನಾಟಿ ಮಾಡಿತ್ತು. ಗಿಡಗಳ ಆಯ್ಕೆಯನ್ನು ಮಾತ್ರ ನಮ್ಮ ಇಲಾಖೆಯಿಂದ ಮಾಡಲಾಗಿತ್ತು. ಪಾರ್ಕ್‌ ನಿರ್ವಹಣೆಯನ್ನು ಸಹ ಆ ಇಲಾಖೆಯೇ ನಿರ್ವಹಿಸಿತ್ತು. ಕಳೆದ ವರ್ಷ ಪಾರ್ಕ್‌ನ ಕೆಲ ಭಾಗಕ್ಕೆ ಬೆಂಕಿ ಬಿದ್ದು, ಗಿಡಗಳು ಸತ್ತಿದ್ದವು. ಅಲ್ಲಿ ಪುನಃ ಗಿಡಗಳ ನಾಟಿ ಮಾಡಲಾಗಿತ್ತು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.