ADVERTISEMENT

ಮರಣೋತ್ತರ ಪರೀಕ್ಷೆ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 12:33 IST
Last Updated 21 ಮೇ 2019, 12:33 IST
ಶಿರಸಿ ಸರ್ಕಾರಿ ಆಸ್ಪತ್ರೆ ಎದುರು ರಸ್ತೆ ತಡೆದು ಪ್ರತಿಭಟಿಸಿದ ಮೃತರ ಸಂಬಂಧಿಕರು
ಶಿರಸಿ ಸರ್ಕಾರಿ ಆಸ್ಪತ್ರೆ ಎದುರು ರಸ್ತೆ ತಡೆದು ಪ್ರತಿಭಟಿಸಿದ ಮೃತರ ಸಂಬಂಧಿಕರು   

ಶಿರಸಿ: ಅಪಘಾತದಲ್ಲಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕೊಂಡೊಯ್ಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟ ವ್ಯಕ್ತಿಯೊಬ್ಬರ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ, ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಮಂಗಳವಾರ ಇಲ್ಲಿ ರಸ್ತೆ ತಡೆದು, ಪ್ರತಿಭಟಿಸಿದರು.

ಸೋಮವಾರ ರಾತ್ರಿ ನಗರದ ಯಲ್ಲಾಪುರ ರಸ್ತೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಿರಣ ಆಚಾರಿ ಹಾಗೂ ಸೂರಜ್‌ ಮೇಸ್ತಾ ಎಂಬುವವರು ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯುತ್ತಿರುವಾಗ ಕಿರಣ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಾಳು ಸೂರಜ್ ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿ, ಕಿರಣ್ ಶವವನ್ನು ಶಿರಸಿಗೆ ಸರ್ಕಾರಿ ಆಸ್ಪತ್ರೆಗೆ ತರಲಾಯಿತು.

ಮೃತದೇಹ ತಂದಿಟ್ಟು ನಾಲ್ಕೈದು ತಾಸು ಕಳೆದರೂ, ಮರಣೋತ್ತರ ಪರೀಕ್ಷೆಗೆ ವೈದ್ಯರು ಮುಂದಾಗಿಲ್ಲ ಎಂದು ಆರೋಪಿಸಿದ ಮೃತರ ಸಂಬಂಧಿಗಳು, ವೈದ್ಯರ ವಿರುದ್ಧ ಧಿಕ್ಕಾರ ಕೂಗಿದರು. ಕೆಲಕಾಲ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ತಡೆದು, ಪ್ರತಿಭಟಿಸಿದರು.

ADVERTISEMENT

ಅರವಿಂದ ನೇತ್ರೆಕರ ಮಾತನಾಡಿ, ‘ಕಿರಣ್ ಮೃತದೇಹ ಪರೀಕ್ಷಿಸಲು ವೈದ್ಯರು ತೀರಾ ನಿರ್ಲಕ್ಷ್ಯ ಮಾಡಿದರು. ಬೆಳಿಗ್ಗೆಯೇ ಮೃತದೇಹವನ್ನು ತಂದಿದ್ದರೂ ಮಧ್ಯಾಹ್ನದವರೆಗೂ ಯಾರೂ ಸ್ಪಂದಿಸಿಲ್ಲ. ಹುಬ್ಬಳ್ಳಿಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು ಎಂದು ಹಾರಿಕೆ ಉತ್ತರ ನೀಡಿದರು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.