ಶಿರಸಿ: ’ಬದುಕನ್ನು ಪ್ರತಿನಿಧಿಸುವ ಸಾಹಿತ್ಯ ಸಾರ್ವಕಾಲಿಕವಾಗಿದ್ದು, ಲೇಖಕರು ತಮ್ಮ ಬರಹಗಳಿಂದ ಸಮಾಜ ಶುದ್ದೀಕರಿಸುವ ಜತೆಗೆ ತಮ್ಮನ್ನೂ ಶುದ್ದೀಕರಣಕ್ಕೆ ಒಳಪಡಿಸಿಕೊಂಡಾಗ ಶುದ್ಧ ಸಾಹಿತ್ಯ ರೂಪುಗೊಳ್ಳುತ್ತದೆ’ ಎಂದು ಶಿಕ್ಷಣ ತಜ್ಞ ಜಿ.ಎ.ಹೆಗಡೆ ಸೋಂದಾ ಅಭಿಪ್ರಾಯಪಟ್ಟರು.
ನಗರದ ರಂಗಧಾಮದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ 8ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
’ಬದುಕಿನ ಅನುಭವಗಳು ಸಾಹಿತ್ಯದಲ್ಲಿ ಸಂವಹನಗೊಂಡು ಅನುಭಾವವಾದಾಗ ಸಾಹಿತ್ಯದ ಗುರಿ ಈಡೇರಬಲ್ಲದು’ ಎಂದರು.
’ಅಧ್ಯಯನ ಹಾಗೂ ಅನುಭವ ಆಧಾರಿತ, ಕಲಾತ್ಮಕ ಬರಹಗಳು ಸಾಹಿತಿಯೊಬ್ಬನನ್ನು ರೂಪಿಸುತ್ತವೆ. ಸಾಹಿತ್ಯಕ್ಕೆ ಗಟ್ಟಿತನ ನೀಡಿ ಸದಾ ಉಳಿಯುವ ಸಾಹಿತ್ಯ ಸಮಾಜಕ್ಕೆ ಕಾಣಿಕೆಯಾಗುತ್ತದೆ’ ಎಂದ ಅವರು, ‘ಚುಟುಕು ಸಾಹಿತ್ಯ ಗುಟುಕಾಗಿ, ಬೆಳಕಿನ ಬೀಜವಾಗಿ ಜೀವನಕ್ಕೆ ಬೆಳಕಾಗಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಹಿತ್ಯವಾಗಿ ಚುಟುಕು ಸಾಹಿತ್ಯವು ಒಂದ ಪ್ರಕಾರವಾಗಿ ಗಟ್ಟಿಯಾದ ಸಾಹಿತ್ಯ ಧ್ವನಿಯಾಗಿದೆ’ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಎಲ್.ಆರ್.ಭಟ್ ಸಮ್ಮೇಳನ ಉದ್ಘಾಟಿಸಿ, ’ಕಾಲದ ಮಿತಿಯೊಳಗೆ, ಅಕ್ಷರಗಳ ಮಿತಿಯಲ್ಲಿ ಕುಟುಕಿ ಗುಟುಕು ನೀಡುವ ಹಾಗೆ, ಬಾಳಿಗೆ ದಿಕ್ಕೂಚಿಯಂತೆ, ಸಮಾಜಕ್ಕೆ ಸಂದೇಶ ನೀಡುವ ವಿಚಾರಗಳನ್ನು ಅಡಕಗೊಳಿಸಿ ಹೇಳುವ ಕಲೆ ಚುಟುಕು ಸಾಹಿತ್ಯದಲ್ಲಿದೆ’ ಎಂದರು.
ಸಾಹಿತಿ ಕೆ.ವಿ.ಶ್ರೀಕಾಂತ, ಪರಿಷತ್ ಪ್ರಸಾರಾಂಗ ಮುಖ್ಯಸ್ಥ ಚನ್ನಬಸಪ್ಪ ಧಾರವಾಡ ಶೆಟ್ರು, ಮುಕ್ತಕ ಕವಿ ಕೃಷ್ಣ ಪದಕಿ, ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಯು.ನಾಯ್ಕ, ನಿಲೇಕಣಿ ಸರ್ಕಾರಿ ಪಿಯು ಕಾಲೇಜ್ ಪ್ರಾಚಾರ್ಯ ವಸಂತ ನಾಯಕ, ಪ್ರಮುಖರಾದ ಅದಿತಿ ಇತರರಿದ್ದರು.
ಪರಿಷತ್ ರಾಜ್ಯ ಘಟಕದ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ ಮಲ್ಮನೆ ಸ್ವಾಗತಿಸಿದರು.
ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಮುಂದುವರಿಸಲು ಶಾಲಾ –ಕಾಲೇಜುಗಳಲ್ಲಿ ಪುಸ್ತಕ ಹಂಚಿಕೆ ಕಾರ್ಯ ಆಗಬೇಕು.ಕೃಷ್ಣಮೂರ್ತಿ ಕುಲಕರ್ಣಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.