ADVERTISEMENT

‘ತಕ್ಷಣದ ಚಿಕಿತ್ಸೆಯಿಂದ ರೇಬೀಸ್ ಗುಣಮುಖ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:11 IST
Last Updated 23 ಸೆಪ್ಟೆಂಬರ್ 2022, 16:11 IST
ಕಾರವಾರದಲ್ಲಿ ಗುರುವಾರ ರೇಬೀಸ್ ಕುರಿತು ಅಂತರರಾಜ್ಯ ಸಮನ್ವಯ ಸಮಿತಿ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅಧ್ಯಕ್ಷತೆಯಲ್ಲಿ ನಡೆಯಿತು
ಕಾರವಾರದಲ್ಲಿ ಗುರುವಾರ ರೇಬೀಸ್ ಕುರಿತು ಅಂತರರಾಜ್ಯ ಸಮನ್ವಯ ಸಮಿತಿ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅಧ್ಯಕ್ಷತೆಯಲ್ಲಿ ನಡೆಯಿತು   

ಕಾರವಾರ: ‘ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಈವರೆಗೆ ನಾಯಿಗಳು ಕಚ್ಚಿದ6,533 ಹಾಗೂ ಇತರ ಪ್ರಾಣಿಗಳು ಕಚ್ಚಿದ 349 ಪ್ರಕರಣಗಳು ದಾಖಲಾಗಿವೆ. ರೇಬೀಸ್ ಪ್ರಕರಣಗಳು ಕಂಡುಬಂದಿಲ್ಲ‌’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಅರ್ಚನಾ ನಾಯಕ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ, ರೇಬೀಸ್ ಕುರಿತು ಅಂತರರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಯಾವುದೇ ಪ್ರಾಣಿಗಳು ಕಚ್ಚಿದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ರೇಬಿಸ್ ಮಾರಣಾಂತಿಕ ಆಗಬಹುದು. ಆದರೆ. ಭಯಪಡುವಂತಹ ರೋಗವೇನಲ್ಲ. ಇದಕ್ಕೆ ಕೂಡಲೇ ಚಿಕಿತ್ಸೆ ಪಡೆದರೆ ತಡೆಗಟ್ಟಬಹುದು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ‘ಜಿಲ್ಲೆಯಲ್ಲಿ ರೇಬೀಸ್ ತಡೆಯಲು ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕು. ಪ್ರಕರಣಗಳು ಕಂಡುಬಂದರೆ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮಿಷನ್ ರೇಬೀಸ್ ಅಡಿಯಲ್ಲಿ ಕಾರವಾರ ತಾಲ್ಲೂಕಿನ 68 ಶಾಲೆಗಳಿಗೆ ಈಗಾಗಲೇ ಭೇಟಿ ನೀಡಿ, ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇನ್ನುಳಿದ ಶಾಲೆಗಳಲ್ಲೂ ಅರಿವು ಮೂಡಿಸಲು ಬಯಸುವ ಶಿಕ್ಷಕರನ್ನು ನೇಮಿಸಿಕೊಳ್ಳಿ. ಜೊತೆಗೆ ಸರಿಯಾದ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಡಿ.ಎಲ್.ಒ ಶಂಕರ ರಾವ್, ಡಿ.ಡಿ.ಪಿ.ಐ ಈಶ್ವರ ನಾಯ್ಕ ಇದ್ದರು. ಗೋವಾದ ರೇಬೀಸ್ ತಡೆ ಅಭಿಯಾನದ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.