ADVERTISEMENT

ಸರ್ವರ ಆಕರ್ಷಣೆ ರಂಜಾನ್ ಪೇಟೆ

ಭಟ್ಕಳ: ದಿನವೂ ಸಾವಿರಾರು ಜನರಿಂದ ಭೇಟಿ:ತರಹೇವಾರಿ ಅಂಗಡಿಗಳ ಆಕರ್ಷಣೆ

ರಾಘವೇಂದ್ರ ಭಟ್ಟ
Published 30 ಮೇ 2019, 17:45 IST
Last Updated 30 ಮೇ 2019, 17:45 IST
ಭಟ್ಕಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರಂಜಾನ್ ಪೇಟೆಯ ನೋಟ
ಭಟ್ಕಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರಂಜಾನ್ ಪೇಟೆಯ ನೋಟ   

ಭಟ್ಕಳ: ಉಪವಾಸ ವ್ರತಾಚರಣೆ ಆರಂಭವಾಗಿ15 ದಿನಗಳ ಬಳಿಕ ಪಟ್ಟಣದ ಮುಖ್ಯರಸ್ತೆಯಲ್ಲಿ ಅರಳಿಕೊಳ್ಳುವ ರಂಜಾನ್ ಪೇಟೆ, ಸರ್ವಧರ್ಮೀಯರ ಆಕರ್ಷಣೆಯ ಕೇಂದ್ರವಾಗಿದೆ.

ಈದ್ ಉಲ್ ಫಿತ್ರ್ ಹಬ್ಬಕ್ಕೆ 15 ದಿನಗಳು ಇರುವಾಗ ಇಲ್ಲಿನ ಪುರಸಭೆಯು ಪಟ್ಟಣದ ಮುಖ್ಯರಸ್ತೆಯಲ್ಲಿ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಹರಾಜು ಹಾಕುತ್ತದೆ.ಅವುಗಳಲ್ಲಿ ಆರಂಭವಾಗುವತರಹೇವಾರಿ ಅಂಗಡಿಗಳೇ ‘ರಂಜಾನ್ ಪೇಟೆ’ ಎಂದು ಹೆಸರಾಗಿದೆ. ಸಂಜೆ ಆಯಿತೆಂದರೆ ಸಾಕು, ಮನೆ ಮಂದಿಯೆಲ್ಲಾಅಲ್ಲಿಗೆತೆರಳುತ್ತಾರೆ.

ಒಂದೇ ಕುಟುಂಬದ ಸದಸ್ಯರು, ಸ್ನೇಹಿತರು, ಸ್ನೇಹಿತೆಯರು, ಕಾಲೇಜು ಸಹಪಾಠಿಗಳು, ನೆಂಟರಿಷ್ಟರು ಎಲ್ಲರೂ ಒಟ್ಟಾಗಿ ರಂಜಾನ್ ಪೇಟೆಗೆ ಹೋಗುವುದೇ ಒಂದು ಸಡಗರವಾಗಿದೆ. ಜತೆಗೆ ನೆರೆಯ ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರದಿಂದಲೂ ಜನರು ಬರುತ್ತಾರೆ.ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಎಂಬ ಭೇದಭಾವವಿಲ್ಲ. ಎಲ್ಲರೂ ಗುಂಪುಗುಂಪಾಗಿ ಪೇಟೆಯಲ್ಲಿ ತಿರುಗಾಡುವುದನ್ನು, ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿ ಮಾಡುವುದನ್ನು ನೋಡುವುದೇ ಒಂದು ಸೊಗಸು.

ADVERTISEMENT

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಸ್ವಲ್ಪ ಕಡಿಮೆಯಿದೆ. ಈದ್ ಹಬ್ಬಕ್ಕೆ ಇನ್ನೂ ಐದಾರು ದಿನಗಳಿದ್ದು, ಅಷ್ಟರಲ್ಲಿ ಎಷ್ಟು ಆಗುತ್ತೋ ಅಷ್ಟು ವ್ಯಾಪಾರ ಮಾಡಬೇಕು. ಆದರೆ, ನಷ್ಟ ಅಂತೂ ಆಗೋದಿಲ್ಲ’ ಎಂದು ಮಕ್ಕಳ ಸಿದ್ಧ ಉಡುಪು ಅಂಗಡಿ ಇಟ್ಟಿರುವ ಸೈಯದ್ ಮೊಹಮ್ಮದ್ ಫಾಯಿಜ್ ಹೇಳಿದರು.

‘ಶಾಲೆಗಳು ಆರಂಭ ಆಗಿರುವುದರಿಂದ ಪೇಟೆಯಲ್ಲಿ ವ್ಯಾಪಾರ ಸ್ವಲ್ಪ ಕಡಿಮೆಯಿದೆ. ಜನರ ಬಳಿ ದುಡ್ಡೂ ಇಲ್ಲವಾಗಿದೆ. ಕೆಲವರು ಬರೀ ಪೇಟೆ ತಿರುಗುವುದಕ್ಕೆ ಬರುತ್ತಾರೆ. ಏನನ್ನೂ ಖರೀದಿಸುವುದಿಲ್ಲ. ಕಳೆದ ವರ್ಷ ಮಳೆಯಿದ್ದರೂ ಒಳ್ಳೆಯ ವ್ಯಾಪಾರ ಆಗಿತ್ತು. ಇನ್ನೂ ನಾಲ್ಕೈದು ದಿನವಿದೆ ನೋಡಬೇಕು’ ಎನ್ನುತ್ತಾರೆ ಹಣ್ಣಿನ ಅಂಗಡಿಯ ಮೊಹಮ್ಮದ ಫಯಾಜ್.

ಮಕ್ಕಳ ಆಟಿಕೆ ಸಾಮಗ್ರಿಯಅಂಗಡಿ ಮಾಲೀಕ ಶಮಾಸ್ ಕೋಬಟ್ಟೆ ಹೇಳುವಂತೆ, ‘ಬಟ್ಟೆ ವ್ಯಾಪಾರ ಸೇರಿದಂತೆ ಇತರ ವಸ್ತುಗಳ ಮಾರಾಟ ಕಡಿಮೆಯಿದೆ. ಆದರೆ, ನಮಗೆ ಒಳ್ಳೆಯ ವ್ಯಾಪಾರ ಆಗುತ್ತಿದೆ. ಮಕ್ಕಳ ಆಟಿಕೆಗೆ ಬೇಡಿಕೆ ಜಾಸ್ತಿ ಇದೆ. ಕೊನೆಯ ಮೂರ್ನಾಲ್ಕು ದಿನ ಎಲ್ಲರಿಗೂ ಒಳ್ಳೆಯ ವ್ಯಾಪಾರ ಆಗಬಹುದು’ಎಂದು ಆಶಾಭಾವ ವ್ಯಕ್ತಪಡಿಸಿದರು.

ಶುಕ್ರವಾರಕ್ಕೆ ಉಪವಾಸ ವ್ರತಾಚರಣೆ 26ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನು ನಾಲ್ಕು ದಿನದಲ್ಲಿ ಈದ್ ಹಬ್ಬದ ಆಚರಣೆ ನಡೆಯಲಿದೆ. ಹಬ್ಬದ ಹಿಂದಿನ ದಿನ ತಡರಾತ್ರಿಎರಡುಗಂಟೆಯವರೆಗೆ ರಂಜಾನ್ ಪೇಟೆಯಲ್ಲಿ ವಹಿವಾಟು ನಡೆಯಲಿದೆ.ಬೆಳಗಾಗುವುದರೊಳಗೆ ಬಹುತೇಕ ಅಂಗಡಿಗಳು ಖಾಲಿ ಆಗಿರುತ್ತವೆ.

ಬೆಳಕಿನಲ್ಲಿ ಜಗಮಗಿಸುವ ಅಂಗಡಿಗಳು:ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ, ಪಾದರಕ್ಷೆ,ಚೀಲಗಳು, ಪಾತ್ರೆ, ಬಟ್ಟೆ, ಮಕ್ಕಳ ಆಟಿಕೆ, ಬಳೆ, ಜುಮಕಿ ಅಂಗಡಿಗಳು ಆಕರ್ಷಿಸುತ್ತವೆ. ಸಿಹಿತಿಂಡಿ, ರಂಜಾನ್ ಖಾದ್ಯಗಳನ್ನು ಮಾರಾಟ ಮಾಡುವ ಅಂಗಡಿಗಳೂ ಗಮನ ಸೆಳೆಯುತ್ತವೆ. ತರಹೇವಾರಿ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಅಂಗಡಿಗಳು ರಂಜಾನ್ ಪೇಟೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.