ADVERTISEMENT

ಬಾಲಕಿಯ ಅತ್ಯಾಚಾರ: ಮೂರು ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 14:29 IST
Last Updated 27 ನವೆಂಬರ್ 2019, 14:29 IST
   

ಕಾರವಾರ: ಬಾಲಕಿಯ ಅತ್ಯಾಚಾರ ಹಾಗೂ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಬುಧವಾರ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಅಲ್ಲದೇ ₹ 21 ಸಾವಿರ ದಂಡವನ್ನೂ ವಿಧಿಸಿದೆ.

ಅಂಕೋಲಾ ತಾಲ್ಲೂಕಿನ ರಾಮನಗುಳಿ ಗ್ರಾಮದ ನಿವಾಸಿ ಗೋವಿಂದ ಚಿಪಗಾಂವಕರ, ಪೊಕ್ಸೊಕಾಯ್ದೆಯಡಿ ಶಿಕ್ಷೆಗೊಳಪಟ್ಟ ಅಪರಾಧಿ.

ಆತ 2014ರ ಜುಲೈ 17ರಂದು ಮಧ್ಯಾಹ್ನ ಬಾಲಕಿಯ ಮನೆಗೆ ಅಕ್ರಮ ಪ್ರವೇಶ ಮಾಡಿದ್ದ. ನೊಂದ ಬಾಲಕಿಯ ಬುದ್ಧಿಮಾಂದ್ಯ ಅಕ್ಕನನ್ನು ಹಿಡಿಯಲು ಪ್ರಯತ್ನಿಸಿದ್ದ. ಆಗ ಮಧ್ಯಪ್ರವೇಶಿಸಿದ್ದ ಬಾಲಕಿಯ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹಲ್ಲೆ ಮಾಡಿದ್ದ. ಬಳಿಕ ಅತ್ಯಾಚಾರವೆಸಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದ.

ADVERTISEMENT

ಈಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನಅಂಕೋಲಾ ಪೊಲೀಸ್ ತನಿಖಾಧಿಕಾರಿ ಗಣೇಶ ಎಂ.ಹೆಗಡೆ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ವಿಪುಲಾ ಎಂ.ಬಿ.ಪೂಜಾರಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.

ದಂಡದ ಮೊತ್ತದಲ್ಲಿ ₹15 ಸಾವಿರವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಅವರು ಸೂಚಿಸಿದ್ದಾರೆ. ಇದರ ಹೊರತಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬಾಲಕಿಗೆ ₹ 25ಸಾವಿರ ಪರಿಹಾರ ಕೊಡುವಂತೆಯೂ ತಮ್ಮತೀರ್ಪಿನಲ್ಲಿ ಆದೇಶಿಸಿದ್ದಾರೆ.ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಪೊಕ್ಸೊ ಅಭಿಯೋಜಕ ಸುಭಾಷ ಪಿ.ಕೈರನ್ನ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.