ಯಲ್ಲಾಪುರ: ‘ಆರ್‌ಸಿಬಿ ವಿಜಯೋತ್ಸವವನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡ ರಾಜ್ಯ ಸರ್ಕಾರ 11 ಜನರ ಸಾವಿಗೆ ಕಾರಣವಾದ ಅಂದಿನ ಘಟನೆಯ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟುವ ಕೆಲಸ ಮಾಡುತ್ತಿದೆʼ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಟಿಎಂಎಸ್ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯೋತ್ಸವ ಆಚರಣೆಗೂ ಮುನ್ನ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಘಟನೆ ನಡೆದ ನಂತರ ಅದರ ನೈತಿಕ ಹೊಣೆಗಾರಿಕೆ ಹೊತ್ತಿಲ್ಲ. ವಯನಾಡಿನಲ್ಲಿ ಆನೆ ತುಳಿತದಿಂದ ಮೃತಪಟ್ಟವರಿಗೆ ₹25 ಲಕ್ಷ ನೀಡುವ ಸರ್ಕಾರ ಇಲ್ಲಿ ₹10 ಲಕ್ಷ ಘೋಷಿಸಿದೆ. ಮೃತರ ಕುಟುಂಬಕ್ಕೆ ₹50 ಲಕ್ಷ ಕೊಡಬೇಕು’ ಎಂದರು.
‘ಇದೊಂದು ಹೊಣೆಗೇಡಿ ಸರ್ಕಾರ. ಅಭಿವೃದ್ಧಿಗೆ ಹಣ ಇಲ್ಲ. ಗುತ್ತಿಗೆ ನೌಕರರಿಗೆ ಸರಿಯಾದ ಸಂಬಳ ಇಲ್ಲ. ಇವರಿಗೆ ಸಾಧನಾ ಸಮಾವೇಶ ಯಾಕೆ. ವೇದನಾ ಸಮಾವೇಶ ಮಾಡಲಿ’ ಎಂದು ತಿಳಿಸಿದರು.
ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ,‘ತಾಲ್ಲೂಕಿನಲ್ಲಿ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆ ನಿರ್ಲಕ್ಷಿಸಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಿಲ್ಲ. ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಇಲ್ಲ. ತಾಲ್ಲೂಕಿಗೆ ಪೂರ್ಣಾವಧಿ ತಹಶೀಲ್ದಾರರಿಲ್ಲ’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ ಹೆಗಡೆ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯರ ಅನುಮತಿ ಇಲ್ಲದೇ ಅಧಿಕಾರಿಗಳು ಮನೆ ನಂ ನೀಡುತ್ತಿದ್ದಾರೆ. 15ನೇ ಹಣಕಾಸು ಯೋಜನೆಯ ಅನುದಾನವನ್ನು ಬೇಕಾಬಿಟ್ಟಿ ಹಂಚಲಾಗುತ್ತಿದೆ. ಮನೆ ಕಟ್ಟಿಕೊಂಡವರಿಗೆ ಬಿಲ್ ಬಾಕಿ ಇದೆ. ಪಂಚಾಯಿತಿಯಲ್ಲಿ ಹಣ ಇಲ್ಲ’
ಎಂದು ದೂರಿದರು.
ಪ್ರಮುಖರಾದ ಉಮೇಶ ಭಾಗ್ವತ, ಜಿ.ಎನ್ ಗಾಂವ್ಕರ, ಕೆ.ಟಿ.ಹೆಗಡೆ, ಪ್ರೇಮಕುಮಾರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.