ADVERTISEMENT

ಸಾತೊಡ್ಡಿ ಜಲಪಾತದಲ್ಲಿ ದಿಢೀರ್ ಹೆಚ್ಚಿದ ನೀರು: ಇಬ್ಬರು ಯುವಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 14:30 IST
Last Updated 4 ಅಕ್ಟೋಬರ್ 2022, 14:30 IST

ಯಲ್ಲಾಪುರ: ತಾಲ್ಲೂಕಿನ ಸಾತೊಡ್ಡಿ ಜಲಪಾತದಲ್ಲಿ ಏಕಾಏಕಿ ನೀರು ಹರಿದು ಬಂದು, ಹಳ್ಳದ ಮಧ್ಯಭಾಗದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಗ್ರಾಮ ಅರಣ್ಯ ಸಮಿತಿಯವರು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.

ಸೋಮವಾರ ಸಂಜೆ 4.30ರ ಸುಮಾರಿಗೆ ಮೈಸೂರಿನ ಏಳೆಂಟು ಜನ ಜಲಪಾತವನ್ನು ನೋಡಲು ಬಂದಿದ್ದರು. ಅಲ್ಲಿದ್ದ ಗ್ರಾಮ ಅರಣ್ಯ ಸಮಿತಿಯ ರಕ್ಷಕರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರು. ಪಾಲಕರ ಮಾತನ್ನೂ ಕೇಳದ ಇಬ್ಬರು ಯುವಕರು ನೀರಿಗೆ ಇಳಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಾತೊಡ್ಡಿ ಪ್ರದೇಶದಲ್ಲಿ ಮಳೆ ಇರಲಿಲ್ಲ. ಆದರೆ, ಯಲ್ಲಾಪುರ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ಜಲಪಾತದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಯಿತು. ಇದರಿಂದ ಕಂಗಾಲಾದ ಯುವಕರು ನೀರಿನಿಂದ ಈಚೆಗೆ ಬರಲಾರದೇ ಎತ್ತರದ ಕಲ್ಲನ್ನೇರಿ ಕುಳಿತಿದ್ದರು.

ADVERTISEMENT

ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಕಂಚನಗದ್ದೆ, ತಕ್ಷಣ ಕಾರ್ಯ ಪ್ರವೃತ್ತರಾಗಿ ತಮ್ಮ ತಂಡದ ಹನುಮಂತ ಮಹಾಲೆ, ಶ್ರೀಧರ್ ಮಹಾಲೆ ಶಶಿಧರ ಕೋಟೆಮನೆ, ಪರಪ್ಪ ಬಡಗವಿ, ಅರಣ್ಯ ರಕ್ಷಕ ಸಂಗಮೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಾನಂದ, ಯಶವಂತ ಪಟಗಾರ ಇವರೊಂದಿಗೆ ರಕ್ಷಣಾ ಸಲಕರಣೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.

ರಾತ್ರಿ ಸುಮಾರು 11.30ರವರೆಗೂ ನೀರಿನ ಹರಿವು ಕಡಿಮೆಯಾಗದ ಕಾರಣ ಲೈಫ್ ಜಾಕೆಟ್, ರಕ್ಷಣಾ ಸಾಮಗ್ರಿಗಳೊಂದಿಗೆ ನೀರಿಗಿಳಿದು ಹರ ಸಾಹಸ ಪಟ್ಟು ರಾತ್ರಿ 1 ಗಂಟೆಯ ಸುಮಾರಿಗೆ ಯುವಕರನ್ನು ರಕ್ಷಿಸಿ ನೀರಿನಿಂದ ಹೊರ ತರುವಲ್ಲಿ ಯಶಸ್ವಿಯಾದರು. ವಿಷಯ ತಿಳಿದು ಅಲ್ಲಿಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ '112' ಪೊಲೀಸ್ ಸಿಬ್ಬಂದಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.