ಕಾರವಾರ: ‘ಜಾತೀಯತೆ ಹೋಗಲಾಡಿಸುವುದು ನಮ್ಮ ಕರ್ತವ್ಯ. ಜಾತಿಗೆ ಜೋತು ಬಿದ್ದು ರಾಜಕೀಯ ಲಾಭ ಪಡೆಯುವುದು ರಾಷ್ಟ್ರಕ್ಕೆ ಮಾಡುವ ದೊಡ್ಡ ವಂಚನೆ’ ಎಂದು ರಾಷ್ಟ್ರೀಯ ಸ್ವಯಂ ಸಂಘದ ಕರ್ನಾಟಕ ಪ್ರಾಂತದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ಇಲ್ಲಿನ ಹಿಂದು ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆರ್‌ಎಸ್ಎಸ್ ಕಾರವಾರ ಪ್ರಾಂತದಿಂದ ಹಮ್ಮಿಕೊಂಡಿದ್ದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಮ್ಯುನಿಸ್ಟ್ ವಾದ, ಸಮಾಜವಾದ ಸಿದ್ದಾಂತ ಜಗತ್ತಿನೆಲ್ಲೆಡೆ ಮೂಲೆಗುಂಪಾಗಿದೆ. ಈಗ ಜಾತ್ಯತೀತ ವಾದದ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಪ್ರಯತ್ನ ನಡೆದಿದೆ. ಜಾತ್ಯತೀತತೆ ಹಿಂದೂಗಳ ರಕ್ತದಲ್ಲಿದೆ. ದೇವನೊಬ್ಬ ನಾಮ ಹಲವು ಎಂದು ಜಪಿಸಿದ್ದು ಹಿಂದೂಗಳು ಮಾತ್ರ. ಜಗತ್ತು ಒಂದು ಮನೆ, ಮಾನವರೆಲ್ಲ ಕುಟುಂಬ ಸದಸ್ಯರೆಂದು ತಿಳಿದು ಬಾಳಿದವರು ಹಿಂದೂಗಳು’ ಎಂದರು.
‘ನೂರು ವರ್ಷ ತುಂಬಿದರೂ ಸಂಘಕ್ಕೆ ಮುಪ್ಪು ಬಂದಿಲ್ಲ. ಪ್ರತಿ ಪೀಳಿಗೆಯ ತರುಣರು ಸಂಘಕ್ಕೆ ಸೇರಿದ್ದಾರೆ. ನೂರು ವರ್ಷದಲ್ಲಿ ಸಂಘ ಸಾಕಷ್ಟು ಸಂಕಟ ಎದುರಿಸಿದೆ. ಸಂಘ ಒಡೆಯಲು ಹಲವು ಬಾರಿ ಷಡ್ಯಂತ್ರ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರ್ವಸ್ಪರ್ಶಿ ಸಂಘಟನೆ. ಸಂಘದ ವಿರುದ್ಧದ ಅಪಪ್ರಚಾರಗಳೆಲ್ಲ ಕಾಲಕ್ರಮೇಣ ಅಳಿದು ಹೋಗುತ್ತದೆ’ ಎಂದರು.
‘ವಿದೇಶಗಳಿಂದ ಎರವಲು ತಂದ ಸಿದ್ಧಾಂತಗಳು ಹೆಚ್ಚು ಕಾಲ ಉಳಿಯಲಿಲ್ಲ. ಸಂಘವು ಪ್ರತಿಪಾದಿಸಿದ್ದು ಅಪ್ಪಟ ಭಾರತೀಯ ಸಿದ್ಧಾಂತ. ದೇಶ ಮೊದಲು ಎಂಬುದು ಸಂಘದ ಪ್ರತಿ ಸ್ವಯಂ ಸೇವಕರ ಧ್ಯೇಯ’ ಎಂದರು.
ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಜಿ.ಪಿ. ಕಾಮತ್ ಇದ್ದರು. ಗಣವೇಷ ಧರಿಸಿದ್ದ ಸಾವಿರಕ್ಕೂ ಹೆಚ್ಚು ಆರ್‌ಎಸ್ಎಸ್ ಸ್ವಯಂ ಸೇವಕರು ನಗರದಲ್ಲಿ ಪಥಸಂಚಲನ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.