ADVERTISEMENT

ಶಿರಸಿ: ಗ್ರಾ.ಪಂ ಆದಾಯ ವೃದ್ಧಿಸಿದ ಬಡಾವಣೆ

ದುಬಾರಿ ದರದ ಪರಿಣಾಮ:ನಗರ ಹೊರವಲಯದಲ್ಲಿ ಹೆಚ್ಚಿದ ನಿವೇಶನ ಖರೀದಿ

ರಾಜೇಂದ್ರ ಹೆಗಡೆ
Published 22 ಆಗಸ್ಟ್ 2025, 3:05 IST
Last Updated 22 ಆಗಸ್ಟ್ 2025, 3:05 IST
ಶಿರಸಿ ತಾಲ್ಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡಾವಣೆ
ಶಿರಸಿ ತಾಲ್ಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡಾವಣೆ   

ಶಿರಸಿ: ನಗರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಜಾಗದ ಕೊರತೆ ಇರುವುದರಿಂದ ಹೊರವಲಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂಪರಿವರ್ತನೆಯೊಂದಿಗೆ ಬಡಾವಣೆಗಳು ಹೆಚ್ಚುತ್ತಿವೆ. ಅವುಗಳ ತೆರಿಗೆ ಪಾವತಿಯ ಕಾರಣದಿಂದ ಗ್ರಾಮ ಪಂಚಾಯಿತಿಗಳ ಆದಾಯ ಏರಿಕೆ ಕಾಣತೊಡಗಿದೆ.

ಅಂದಾಜು 80 ಸಾವಿರ ಜನಸಂಖ್ಯೆ ಹೊಂದಿರುವ ಶಿರಸಿ ನಗರ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ನಗರ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ಜಾಗದ ಕೊರತೆ ಆಗುತ್ತಿದೆ. ಇಲ್ಲಿ ನಿವೇಶನಗಳ ದರ ಹೆಚ್ಚಿರುವ ಪರಿಣಾಮ, ನಗರಕ್ಕೆ ಸಮೀಪದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಭೂಮಿಗಳನ್ನು ಖರೀದಿಸಿ ನಿವೇಶನಗಳನ್ನಾಗಿ ಬದಲಾಯಿಸಿ, ಸಣ್ಣ ಸಣ್ಣ ಬಡಾವಣೆಯ ಮಾದರಿಯಲ್ಲಿ ನಿರ್ಮಾಣ ಮಾಡುವ ಉದ್ಯಮ ವ್ಯಾಪಕವಾಗಿದೆ.

ಹುತ್ಗಾರ, ದೊಡ್ನಳ್ಳಿ, ಉಂಚಳ್ಳಿ, ಇಸಳೂರು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹತ್ತಾರು ಬಡಾವಣೆಗಳು ಈಗಾಗಲೆ ನಿರ್ಮಾಣಗೊಂಡಿವೆ. ಅಂತಹ ಪಂಚಾಯಿತಿಗಳ ವಾರ್ಷಿಕ ಆದಾಯದಲ್ಲಿ ಸರಾಸರಿ ₹10 ರಿಂದ ₹15 ಲಕ್ಷ ಹೆಚ್ಚಳವಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘2020ರ ಬಳಿಕ ನಗರದ ಸುತ್ತಲಿನ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳ ಕೃಷಿ ಭೂಮಿಗಳನ್ನು ಕೃಷಿಯತರ ಭೂಮಿಯಾಗಿ ಪರಿವರ್ತಿಸಿ, ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಮಹಾನಗರಗಳಲ್ಲಿ ಉದ್ಯೋಗದಲ್ಲಿದ್ದವರು ಕೋವಿಡ್ ವೇಳೆ ಗ್ರಾಮಕ್ಕೆ ವಾಪಸಾದಾಗ ಈ ಬಡಾವಣೆಗಳ  ನಿವೇಶನಗಳಿಗೆ ಬೇಡಿಕೆ ಹೆಚ್ಚಿತ್ತು. ನಿವೇಶನಗಳ ಖರೀದಿ ಹೆಚ್ಚುತ್ತಿದ್ದಂತೆ ಗ್ರಾಮ ಪಂಚಾಯಿತಿಗಳ ಆದಾಯ ಏರಿಕೆ ಆಗತೊಡಗಿತು. ನಿವೇಶನ ಖರೀದಿಸದವರು ಮನೆ ನಿರ್ಮಾಣಕ್ಕೆ ಅನುಮತಿ, ನೀರಿನ ಕರ, ವಸತಿ ಕರ ಹಾಗೂ ಇತರ ಕರ ಸೇರಿದಂತೆ ವಿವಿಧ ಹಂತಗಳಲ್ಲಿ ತೆರಿಗೆ ತುಂಬಬೇಕಾಗಿದೆ. ಕಳೆದ ಒಂದು ವರ್ಷದಲ್ಲಿ ಶಿರಸಿ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಒಟ್ಟೂ ಆದಾಯದಲ್ಲಿ ₹1 ಕೋಟಿಯಷ್ಟು ಇಂಥ ಬಡಾವಣೆಗಳಿಂದಲೇ ಬರುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಯೊಬ್ಬರು ವಿವರಿಸಿದರು.

ಗ್ರಾ.ಪಂಗಳಿಗೆ ಆದಾಯ ಸರಾಸರಿ ₹10–₹15 ಲಕ್ಷ ಹೆಚ್ಚಳ | 2020ರ ಬಳಿಕ ಹೆಚ್ಚಿದ ಬಡಾವಣೆ ನಿರ್ಮಾಣ | 300–400 ಎಕರೆ ಕೃಷಿ ಭೂಮಿ ಬಡಾವಣೆಗಳಾಗಿ ಪರಿವರ್ತನೆ 
ಬಡಾವಣೆ ನಿರ್ಮಿಸುವವರು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಶುಲ್ಕ ಬಡಾವಣೆಯ ಖಾಲಿ ನಿವೇಶನಗಳಿಗೂ ತೆರಿಗೆ ತುಂಬುತ್ತಾರೆ. ಇದರಿಂದ ಸಾಕಷ್ಟು ಆದಾಯ ಬರುತ್ತಿದೆ
ಶ್ರೀನಾಥ ಶೆಟ್ಟಿ ಕುಳವೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ನೂರಾರು ಬಡಾವಣೆಗಳು

‘ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ರಿಂದ 3 ಎಕರೆ ವ್ಯಾಪ್ತಿಯ 40 ಬಡಾವಣೆಗಳು ನಿರ್ಮಾಣವಾಗಿವೆ. ಈ ಪಂಚಾಯಿತಿಯಲ್ಲಿ ವಾರ್ಷಿಕವಾಗಿ ₹15–₹20 ಲಕ್ಷ ಆದಾಯ ಹೆಚ್ಚಾಗಿದೆ. ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 35 ಬಡಾವಣೆಗಳಿಂದ ₹8 ಲಕ್ಷಕ್ಕೂ ಹೆಚ್ಚಿನ ಆದಾಯ ಪಂಚಾಯಿತಿಗೆ ಬರುತ್ತಿದೆ. ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 27 ಕುಳವೆ ಗ್ರಾಮ ಪಂಚಾಯಿತಿ 1 ಹುಣಸೇಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ 4 ಬನವಾಸಿ ಗ್ರಾಮ ಪಂಚಾಯಿತಿ ಹಾಗೂ ಬನವಾಸಿಯ ಹೊರ ವಲಯದಲ್ಲಿ 8 ಬಡಾವಣೆಗಳು ನಿರ್ಮಾಣವಾಗಿವೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.