ADVERTISEMENT

ಪರಿಶಿಷ್ಟರ ಅನುದಾನ ದುರ್ಬಳಕೆಯಾದರೆ ಶಿಸ್ತುಕ್ರಮ

ಜಾಗೃತ ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿ.ಸಿ ಲಕ್ಷ್ಮಿಪ್ರಿಯಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:33 IST
Last Updated 30 ಸೆಪ್ಟೆಂಬರ್ 2025, 6:33 IST
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.   

ಕಾರವಾರ: ‘ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡುವ ಅನುದಾನಗಳನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ್ದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಚ್ಚರಿಸಿದರು.

‘ಪರಿಶಿಷ್ಟರು ವಾಸವಿರುವ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಮೀಸಲಿಟ್ಟ ಅನುದಾನವನ್ನು ಪರಿಶಿಷ್ಟರು ಇಲ್ಲದ ಪ್ರದೇಶಗಳಿಗೆ ಬಳಕೆ ಮಾಡಬಾರದು’ ಎಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

‘ಜಾಗೃತಿ ಮೂಡಿದ್ದರೂ ಜಿಲ್ಲೆಯ ಕೆಲವೆಡೆ ಪರಿಶಿಷ್ಟರ ಮೇಲೆ ದೌರ್ಜನ್ಯ ಇನ್ನೂ ನಿಂತಿಲ್ಲ ಎಂಬ ದೂರುಗಳಿವೆ. ಅಂತಹ ದೂರುಗಳು ಬರಲು ಆಸ್ಪದ ಕೊಡಬಾರದು. ಪರಿಶಿಷ್ಟರ ದೌರ್ಜನ್ಯ ಜಿಲ್ಲೆಯಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು. ದೌರ್ಜನ್ಯ ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ಉಂಟಾಗುವುದನ್ನು ತಪ್ಪಿಸಿ, ಶೀಘ್ರದಲ್ಲಿ ಪರಿಹಾರ ವಿತರಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

‘ಉಪವಿಭಾಗಗಳ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳು ನಿಯಮಿತವಾಗಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸುವ ಮೂಲಕ ಪರಿಶಿಷ್ಟರ ಸಮಸ್ಯೆಗಳನ್ನು ಆಲಿಸಬೇಕು’ ಎಂದರು.

ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿ ನೀಡುವಂತೆ, ಸಮುದಾಯ ಭವನಗಳಲ್ಲಿ ನಿಗದಿಪಡಿಸಿರುವ ದರವನ್ನು ಕಡಿಮೆಗೊಳಿಸುವ, ಬ್ಯಾಂಕ್‌ಗಳಲ್ಲಿ ಶೀಘ್ರದಲ್ಲಿ ಸಾಲ ವಿತರಿಸುವಂತೆ ಸಭೆಯಲ್ಲಿದ್ದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಬೇಡಿಕೆ ಇಟ್ಟರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಕೃಷ್ಣಮೂರ್ತಿ, ಸರ್ಕಾರಿ ಅಭಿಯೋಜಕಿ ಸುನೀತಾ ನಾಗೇಕರ್, ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಇದ್ದರು.

3 ವರ್ಷದಲ್ಲಿ 168 ಪ್ರಕರಣ

‘ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 168 ಪರಿಶಿಷ್ಟ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 4 ಪ್ರಕರಣಗಳು ತನಿಖೆಗೆ ಅನ್ಯ ಜಿಲ್ಲೆಗೆ ವರ್ಗಾವಣೆಯಾಗಿವೆ. ಎಫ್ಐಆರ್ ಆದ 153 ಪ್ರಕರಣಗಳಲ್ಲಿ ₹1.17 ಕೋಟಿ ಪರಿಹಾರ ವಿತರಿಸಲಾಗಿದೆ. ಚಾರ್ಜ್‍ಶೀಟ್ ಸಲ್ಲಿಕೆಯಾಗಿರುವ 108 ಪ್ರಕರಣಗಳ ಸಂತ್ರಸ್ತರಿಗೆ ₹1.27 ಕೋಟಿ ಪರಿಹಾರ ವಿತರಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಕೆ.ಉಮೇಶ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.