ADVERTISEMENT

ಬಡ್ಡಿ ಮೇಲೆ ಮತ್ತೆ ಸರ್ಕಾರದ ಕಣ್ಣು: ಇಲಾಖೆಯಿಂದ ಎಲ್ಲ ಶಾಲೆಗಳಿಗೆ ಆದೇಶ

ಚೆಕ್ ನೀಡುವಂತೆ ಸುತ್ತೋಲೆ

ಸಂಧ್ಯಾ ಹೆಗಡೆ
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಶಿರಸಿ: ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಶಾಲೆಗಳ ಮೇಲೆ ಕಣ್ಣು ಬಿದ್ದಿದೆ. ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಗೆ ಮಂಜೂರಾಗಿದ್ದ ಅನುದಾನದ ಮೇಲೆ ಸಂಗ್ರಹವಾಗಿರುವ ಬಡ್ಡಿ ಮೊತ್ತವನ್ನು ವಾಪಸ್‌ ನೀಡುವಂತೆ ಈ ವರ್ಷ ಪುನಃ ಎಲ್ಲ ಶಾಲೆಗಳಿಗೆ ಆದೇಶ ರವಾನಿಸಿದೆ.

ಸರ್ಕಾರಿ ಶಾಲೆಗಳ ಬ್ಯಾಂಕ್ ಖಾತೆಗಳಲ್ಲಿ ಇರುವ ಬಡ್ಡಿ ಹಣವನ್ನು ವಾಪಸ್‌ ಕಳುಹಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಅನ್ವಯ, ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಎಲ್ಲ ತಾಲ್ಲೂಕುಗಳ ಶಾಲೆಗಳಿಗೆ, ಆದಷ್ಟು ಶೀಘ್ರ ಚೆಕ್ ನೀಡುವಂತೆ ಸೂಚನೆ ನೀಡಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ವರ್ಷದ ಬಡ್ಡಿ ಹಣ ₹3.25 ಕೋಟಿ ಇದ್ದರೆ, ಒಂದು ವರ್ಷದಲ್ಲಿ ಮತ್ತೆ ₹2.64 ಲಕ್ಷ ಬಡ್ಡಿ ಸಂಗ್ರಹವಾಗಿದೆ.

ಸಮಗ್ರ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆಗಳ ಅಡಿಯಲ್ಲಿ ಕಟ್ಟಡ ಅಥವಾ ಇನ್ನಿತರ ಕಾಮಗಾರಿಗಳಿಗೆ ಶಾಲೆಗಳಿಗೆ ಮಂಜೂರಾಗುವ ಅನುದಾನವನ್ನು ತಕ್ಷಣಕ್ಕೆ ಬಳಕೆ ಮಾಡಲು ಸಾಧ್ಯವಾಗದಿದ್ದಾಗ, ಆ ಮೊತ್ತವನ್ನು ಶಾಲೆಗಳ ಬ್ಯಾಂಕ್‌ ಖಾತೆಗಳಲ್ಲಿ ಇಡಲಾಗುತ್ತದೆ. ಪ್ರತಿ ಶಾಲೆಗೆ ಸಿಗುವ ಲಕ್ಷಾಂತರ ರೂಪಾಯಿ ಅನುದಾನ ನಾಲ್ಕಾರು ತಿಂಗಳು ಆ ಖಾತೆಯಲ್ಲೇ ಉಳಿದರೆ ದೊಡ್ಡ ಮೊತ್ತದ ಬಡ್ಡಿ ಸೇರುತ್ತದೆ. ಹೀಗೆ ಸಂಗ್ರಹವಾಗಿರುವ ಬಡ್ಡಿ ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲು, ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರಿಂದ ಸಹಿ ಪಡೆಯುತ್ತಿದ್ದಾರೆ.

ADVERTISEMENT

‘ಶಾಲೆಗೆ ಅನುದಾನ ನೀಡಿದ ಮೇಲೆ ಅದರಿಂದ ಸಿಗುವ ಬಡ್ಡಿ ಹಣವೂ ಶಾಲೆಗೇ ಸೇರಬೇಕು. ಸರ್ಕಾರ ಹೀಗೆ ಎಲ್ಲ ಹಣವನ್ನು ಕಿತ್ತುಕೊಂಡರೆ, ಶಾಲೆಗೆ ತೀರಾ ಅಗತ್ಯವಿರುವ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜಂಟಿ ಖಾತೆಯಲ್ಲಿರುವ ಬಡ್ಡಿ ಹಣವನ್ನು ಶಾಲೆಯ ಅಭಿವೃದ್ಧಿಗೆ ಮೀಸಲಿರಿಸಬೇಕು’ ಎನ್ನುವ ತಾಲ್ಲೂಕಿನ ಹಲವಾರು ಎಸ್‌ಡಿಎಂಸಿ ಅಧ್ಯಕ್ಷರು, ಚೆಕ್‌ಗೆ ಸಹಿ ಪಡೆದಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಶಾಲೆಗೆ ಡೆಸ್ಕ್, ಬೆಂಚ್ ಪೂರೈಕೆ, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮಾಡಬೇಕಾಗಿದೆ. ಜಂಟಿ ಖಾತೆಯಲ್ಲಿರುವ ₹47,772 ಮೊತ್ತದ ಚೆಕ್‌ಗೆ ಗುರುವಾರ ಸಹಿ ಹಾಕಿದ್ದೇನೆ. ಇನ್ನು ಖಾತೆಯಲ್ಲಿ ಯಾವುದೇ ಹಣ ಉಳಿದಿಲ್ಲ. ಕಳೆದ ವರ್ಷ ₹24 ಸಾವಿರ ಬಜೆಟ್ ಸಿದ್ಧಪಡಿಸಿ ಕಳುಹಿಸಿದ್ದರೆ, ಬಂದಿದ್ದು ಕೇವಲ ₹13 ಸಾವಿರ, ಅದೂ ತೀರಾ ತಡವಾಗಿ. ಇನ್ನೂ ಸಮವಸ್ತ್ರ ಬಂದಿಲ್ಲ. ಇರುವ ಹಣವನ್ನೂ ಹಿಂಪಡೆದರೆ, ಶಾಲೆಯ ತುರ್ತು ಅಗತ್ಯಗಳಿಗೆ ಹೇಗೆ ಸ್ಪಂದಿಸಬೇಕು’ ಎಂದು ಪ್ರಶ್ನಿಸುತ್ತಾರೆ ಇಸಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಪಾದ ಹೆಗಡೆ.

ಅಭಿವೃದ್ಧಿಗೆ ವಿನಿಯೋಗವಾಗುತ್ತದೆ

‘ಸರ್ಕಾರ ರೂಪಿಸಿದ ನಿಯಮ ಇದು. ಸಂಗ್ರಹವಾದ ಬಡ್ಡಿಯನ್ನು ಮಾತ್ರ ವಾಪಸ್‌ ಪಡೆಯಲಾಗುತ್ತದೆ. ಇದು ಸಹ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೇ ವಿನಿಯೋಗವಾಗುತ್ತದೆಯೇ ಹೊರತು ಬೇರೆ ಇಲಾಖೆಗಳಿಗೆ ವರ್ಗಾವಣೆಯಾಗುವುದಿಲ್ಲ. ಎಲ್ಲ ಶಾಲೆಗಳು ಈ ನಿಯಮ ಪಾಲಿಸಬೇಕಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

* ಬಡ್ಡಿ ಹಣವನ್ನು ಯಾವುದೇ ಕಾರಣಕ್ಕೂ ಶಾಲೆಯವರು ಬಳಸುವಂತಿಲ್ಲ. ಅದು ಅಪರಾಧ. ಅದನ್ನು ಪುನಃ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ

-ದಿವಾಕರ ಶೆಟ್ಟಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.