ADVERTISEMENT

ಕಾರವಾರ: ಹೆದ್ದಾರಿ ಪಕ್ಕ ತುಕ್ಕು ಹಿಡಿದ ವಾಹನ

ಮದ್ಯ ಅಕ್ರಮ ಸಾಗಣೆ ಪ್ರಕರಣದಲ್ಲಿ ವಶಕ್ಕೆ ಪಡೆದ ಗಾಡಿ ಗಡಿಭಾಗದಲ್ಲೇ ಠಿಕಾಣಿ

ಗಣಪತಿ ಹೆಗಡೆ
Published 8 ಜೂನ್ 2023, 18:36 IST
Last Updated 8 ಜೂನ್ 2023, 18:36 IST
ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಿಟ್ಟ ವಾಹನಗಳಿಗೆ ತುಕ್ಕು ಹಿಡಿಯುತ್ತಿದೆ
ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಿಟ್ಟ ವಾಹನಗಳಿಗೆ ತುಕ್ಕು ಹಿಡಿಯುತ್ತಿದೆ   

ಕಾರವಾರ: ಮದ್ಯ ಅಕ್ರಮವಾಗಿ ಸಾಗಾಟ ನಡೆಸಿದ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಹತ್ತಾರು ವಾಹನಗಳು ರಾಜ್ಯದ ಗಡಿಭಾಗ ಮಾಜಾಳಿಯ ಚೆಕ್‍ಪೋಸ್ಟ್ ಬಳಿ ನಿಂತಿವೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿಂತ ವಾಹನಗಳು ತುಕ್ಕು ಹಿಡಿಯುತ್ತಿವೆ.

ಕಳೆದ ಕೆಲವು ವರ್ಷಗಳಿಂದಲೂ ಹಲವು ವಾಹನಗಳು ಚೆಕ್‍ಪೋಸ್ಟ್ ಬಳಿ ನಿಂತಲ್ಲೇ ನಿಂತುಕೊಂಡಿವೆ. ಕಾರು, ಲಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ವಾಹನಗಳು ಇಲ್ಲಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆ, ಅದಕ್ಕೂ ಮುನ್ನ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಅವು ಕೂಡ ಇಲ್ಲಿಯೇ ನಿಂತಿವೆ.

ಗೋವಾ ಭಾಗದಿಂದ ರಾಜ್ಯಕ್ಕೆ ಬರುವವರಿಗೆ ಗಡಿಭಾಗದಲ್ಲಿ ಸಾಲು ಸಾಲಾಗಿರುವ ತುಕ್ಕು ಹಿಡಿದ ವಾಹನಗಳೇ ಸ್ವಾಗತ ಕೋರುತ್ತವೆ. ಚೆಕ್‍ಪೋಸ್ಟ್ ಸಮೀಪ, ಹೆದ್ದಾರಿಯ ಎರಡೂ ಬದಿಯಲ್ಲೂ ವಶಕ್ಕೆ ಪಡೆದು ನಿಲ್ಲಿಸಿಟ್ಟ ಖಾಸಗಿ ಬಸ್, ಕಂಟೇನರ್, ಲಾರಿ, ಜೀಪು, ಕಾರುಗಳೇ ಕಾಣಸಿಗುತ್ತಿವೆ.

ADVERTISEMENT

‘ಹೆದ್ದಾರಿ ಬದಿಯಲ್ಲೇ ಭಾರಿ ಗಾತ್ರದ ವಾಹನಗಳನ್ನು ನಿಲ್ಲಿಸಿಡಲಾಗುತ್ತಿದೆ. ಇಲಾಖೆ ಅವುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಬಳಿಕ ಬೇರೆಡೆಗೆ ಸ್ಥಳಾಂತರಿಸಬೇಕು. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿಟ್ಟರೆ ಅಪಘಾತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ’ ಎಂದು ಮಾಜಾಳಿ ಗ್ರಾಮದ ಸುನೀಲ್ ಪಡುವಳಕರ್ ಹೇಳುತ್ತಾರೆ.

‘ಮದ್ಯ, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ವಶಕ್ಕೆ ಪಡೆದ ವಾಹನಗಳನ್ನು ಅದೇ ಸ್ಥಳದಲ್ಲಿ ಇಡುವುದು ವಾಡಿಕೆ. ಅಲ್ಲದೆ ಚೆಕ್‍ಪೋಸ್ಟ್‌ನಲ್ಲಿ ನಿರಂತರ ಕಾವಲು ಇರುವುದರಿಂದ ವಾಹನಗಳು ಸುರಕ್ಷಿತವಾಗಿರುತ್ತವೆ. ಜನರಿಗೆ ಕಾಣುವಂತೆ ವಶಕ್ಕೆ ಪಡೆದ ವಾಹನಗಳನ್ನು ಇಟ್ಟರೆ ಅದು ಅಕ್ರಮ ಸಾಗಾಟ ಮಾಡದಂತೆ ಎಚ್ಚರಿಕೆ ನೀಡಿದಂತೆಯೂ ಆಗುತ್ತದೆ. ಹೀಗಾಗಿ ವಾಹನಗಳನ್ನು ಹೆಚ್ಚಾಗಿ ಚೆಕ್‍ಪೋಸ್ಸ್‌ಗಳ ಸಮೀಪದಲ್ಲೇ ಇಡಲಾಗುತ್ತಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.

‘ಬಹಳ ಹಿಂದೆ ವಶಕ್ಕೆ ಪಡೆದ ಲಾರಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಚೆಕ್‍ಪೋಸ್ಟ್‌ಗೆ ಸ್ವಲ್ಪ ದೂರದಲ್ಲಿರುವ ಜಾಗ ಸಮತಟ್ಟುಗೊಳಿಸಿ ಅಲ್ಲಿ ನಿಲ್ಲಿಸಿಡಲಾಗಿದೆ’ ಎಂದೂ ಹೇಳಿದರು.

ಮಾಜಾಳಿ ಚೆಕ್‍ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಅಬಕಾರಿ ಇಲಾಖೆ ವಶಕ್ಕೆ ‍ಪಡೆದ ಭಾರಿ ಗಾತ್ರದ ವಾಹನಗಳನ್ನು ನಿಲ್ಲಿಸಿಟ್ಟಿರುವುದು
ಚೆಕ್‍ಪೋಸ್ಟ್ ಬಳಿ ನಿಲ್ಲಿಸಲಾದ ಸುಸ್ಥಿತಿಯ ವಾಹನಗಳನ್ನು ಅಬಕಾರಿ ಇಲಾಖೆ ಕಚೇರಿ ಬಳಿ ತಂದು ನಿಲ್ಲಿಸಲು ಕ್ರಮವಹಿಸಲಾಗುವುದು
ಜಗದೀಶ ಕುಲಕರ್ಣಿ ಅಬಕಾರಿ ಇಲಾಖೆ ಉಪ ಆಯುಕ್ತ

ಕಚೇರಿ ಆವರಣದಲ್ಲೂ ವಾಹನ ರಾಶಿ

ನಗರದ ಕೋಡಿಬಾಗದಲ್ಲಿರುವ ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿ ಆವರಣದಲ್ಲೂ ತುಕ್ಕು ಹಿಡಿಯುತ್ತ ನಿಂತಿರುವ 40ಕ್ಕಿಂತ ಹೆಚ್ಚು ವಾಹನಗಳಿವೆ. ಮಳೆ–ಗಾಳಿಗೆ ಸಿಲುಕಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು ಈಗ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿವೆ. ‘ಪ್ರಕರಣ ದಾಖಲಾಗಿ ವಶಕ್ಕೆ ಪಡೆದ ವಾಹನಗಳನ್ನು ಅವುಗಳ ಮಾಲೀಕರು ಕೋರ್ಟ್‍ನ ಮಧ್ಯಂತರ ಒಪ್ಪಿಗೆ ಪಡೆದು ನಿಗದಿತ ಮೊತ್ತದ ಡಿ.ಡಿ. ಪಾವತಿಸಿ ಒಯ್ಯಲು ಅವಕಾಶವಿದೆ. ಇಲ್ಲದಿದ್ದರೆ ಪ್ರಕರಣ ಇತ್ಯರ್ಥಗೊಂಡ ಬಳಿಕ ವಾಹನಗಳನ್ನು ಹರಾಜು ಮೂಲಕ ಮಾರಾಟ ನಡೆಸಲಾಗುತ್ತದೆ’ ಎನ್ನುತ್ತಾರೆ ಅಬಕಾರಿ ಉಪ ಆಯುಕ್ತ ಜಗದೀಶ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.