ADVERTISEMENT

ಸ್ವ ಉದ್ಯೋಗ ಕೈಗೊಳ್ಳಲು ಪ್ರೇರೇಪಿಸಿ: ಶಾಸಕ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:02 IST
Last Updated 30 ಅಕ್ಟೋಬರ್ 2025, 4:02 IST
 ಜೊಯಿಡಾದಲ್ಲಿ ಶಾಸಕ ಆರ್‌.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ನಡೆಯಿತು 
 ಜೊಯಿಡಾದಲ್ಲಿ ಶಾಸಕ ಆರ್‌.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ನಡೆಯಿತು    

ಜೊಯಿಡಾ: ‘ಜೊಯಿಡಾ ಪ್ರವಾಸೋದ್ಯಮದ ಅತ್ಯುತ್ತಮ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸ್ಥಳೀಯವಾಗಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಬಗ್ಗೆ ಕಾಲೇಜಿನಲ್ಲಿ ಉದ್ಯಮಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡು ಕೌಶಲಗಳನ್ನು ವೃದ್ಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ವ ಉದ್ಯೋಗ ಹೊಂದುವಂತೆ ಪ್ರೇರೇಪಿಸಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಮಂಗಳವಾರ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಸಿ ಮಾತನಾಡಿದರು.

ಜೊಯಿಡಾದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಂಜೂರು ಮಾಡುವಂತೆ ಇಲಾಖೆಯ ಸಚಿವರಿಗೆ ಶಿಫಾರಸು ಮಾಡಿದರು. ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬ ಕುರಿತು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ ಕರೆ ಮೂಲಕ ಮಾತನಾಡಿ ಶೀಘ್ರ ಸಮಸ್ಯೆ ಬಗೆಹರಿಸಲು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಕಾಲೇಜಿನ ರಾತ್ರಿ ಕಾವಲುಗಾರರ ವೇತನಕ್ಕೆ ₹42 ಸಾವಿರ ದೇಣಿಗೆ ನೀಡಿದ ಅವರು ಕಾಲೇಜಿಗೆ ಅಗತ್ಯವಿರುವ ಕಂಪ್ಯೂಟರ್‌ಗಳನ್ನು ದಾಂಡೇಲಿ ವೆಸ್ಟ್ ಕಾಸ್ಟ್ ಪೇಪರ್ ಕಾರ್ಖಾನೆಯ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಒದಗಿಸುವುದಾಗಿ ಭರವಸೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಜೇಂದ್ರ ಗಾಂದಲೆ, ನೂತನವಾಗಿ ನಿರ್ಮಿಸುತ್ತಿರುವ ಗ್ರಂಥಾಲಯದ ಪೀಠೋಪಕರಣಗಳ ಖರೀದಿಗೆ ₹50 ಸಾವಿರ ನೆರವು ನೀಡಿದರು.

ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರವಿ ರೇಡ್ಕರ್, ಸುಭಾಷ ವೇಳಿಪ, ಸದಾನಂದ ದಬ್ಗಾರ್, ಸಂಜಯ ಹಣಬರ, ವಿನಯ ದೇಸಾಯಿ, ದೇವಿದಾಸ ದೇಸಾಯಿ, ಕಾಲೇಜಿನ ಪ್ರಾಚಾರ್ಯೆ ಅಂಜಲಿ ರಾಣೆ, ಉಪನ್ಯಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.