ಕಾರವಾರ: ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಸಲುವಾಗಿ ಗೂಡಂಗಡಿಗಳ ಮೇಲೆ ನಿಯಂತ್ರಣ ಹೇರುವ ಜೊತೆಗೆ, ಕಸ ಸಂಗ್ರಹಣೆ ವಾಹನಗಳ ಓಡಾಟದ ಮೇಲೆ ನಿಗಾ ಇರಿಸಲು ಪ್ರತ್ಯೇಕ ನಿರ್ವಹಣಾ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ.
ಇಲ್ಲಿನ ನಗರಸಭೆ ಸಭಾಭವನದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶ ರಾಜ್ಯದ ಇಂಧೋರ್ ನಗರಕ್ಕೆ ಈಚೆಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದ ನಗರಸಭೆ ಸದಸ್ಯರು, ಅಧಿಕಾರಿಗಳು ಅಲ್ಲಿ ಅಭ್ಯಸಿಸಿದ ಕೆಲ ಅಂಶಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಿದರು.
ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯನ್ನು ಸರ್ಕಾರೇತರ ಸಂಸ್ಥೆಗೆ (ಎನ್‌ಜಿಒ) ವಹಿಸಿದ ಕ್ರಮ, ಕಸ ಸಂಗ್ರಹಣೆ ವಾಹನಗಳ ವ್ಯವಸ್ಥಿತ ಓಡಾಟಕ್ಕೆ ರೂಪಿಸಿದ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಕುರಿತು ಹಿರಿಯ ಸದಸ್ಯರಾದ ಪ್ರಕಾಶ ನಾಯ್ಕ, ಸಂದೀಪ ತಳೇಕರ, ಪ್ರೇಮಾನಂದ ಗುನಗಾ ಪ್ರಸ್ತಾಪಿಸಿದರು.
‘ಗೂಡಂಗಡಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸ್ವಚ್ಛತೆ ಕಾಯ್ದುಕೊಳ್ಳಲು ಸವಾಲಾಗಿದೆ. ಮೊದಲು ಅವುಗಳನ್ನು ನಿಯಂತ್ರಿಸಿ. ಯುವಕರನ್ನು, ವಿದ್ಯಾರ್ಥಿಗಳನ್ನು ಒಳಗೊಂಡು ಸ್ವಚ್ಚತೆ ಜಾಗೃತಿ ಮೂಡಿಸಿ’ ಎಂದು ಸದಸ್ಯ ಡಾ.ನಿತಿನ್ ಪಿಕಳೆ ಸಲಹೆ ನೀಡಿದರು.
‘ಕಾರವಾರದಲ್ಲಿ ಪ್ರತಿದಿನ ಸರಾಸರಿ 27 ಟನ್ ಕಸ ಸಂಗ್ರಹ ಆಗುತ್ತಿದೆ. ಕಸ ಸಂಗ್ರಹಣೆ ವಾಹನಗಳು ನಿರ್ದಿಷ್ಟ ಸಮಯಗಳಲ್ಲೇ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಸಂಚರಿಸುವಂತೆ ನಿಗಾ ಇರಿಸಲು ಪ್ರತ್ಯೇಕ ನಿರ್ವಹಣಾ ವ್ಯವಸ್ಥೇ ರೂಪಿಸಲಾಗುವುದು’ ಎಂದು ಪೌರಾಯುಕ್ತ ಜಗದೀಶ ಹುಲಗೆಜ್ಜಿ ಹೇಳಿದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.