ADVERTISEMENT

ಬಾಪೂಜಿ ಕೇಂದ್ರದಲ್ಲಿ ‘ಸೇವೆ’ ಸ್ಥಗಿತ

ಗ್ರಾಮೀಣ ಜನರ ಅನುಕೂಲಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅನುಷ್ಠಾನಗೊಂಡಿದ್ದ ಹಿಂದಿನ ಸರ್ಕಾರದ ಕಾರ್ಯಕ್ರಮ

ಸಂಧ್ಯಾ ಹೆಗಡೆ
Published 8 ಜುಲೈ 2018, 12:47 IST
Last Updated 8 ಜುಲೈ 2018, 12:47 IST
ಬಾಪೂಜಿ ಸೇವಾ ಕೇಂದ್ರ ಕಲ್ಪನೆ (ಸಾಂದರ್ಭಿಕ ಚಿತ್ರ)
ಬಾಪೂಜಿ ಸೇವಾ ಕೇಂದ್ರ ಕಲ್ಪನೆ (ಸಾಂದರ್ಭಿಕ ಚಿತ್ರ)   

ಶಿರಸಿ: ಗ್ರಾಮೀಣ ಜನರಿಗೆ ಹಳ್ಳಿಯಲ್ಲೇ ಸಕಲ ಸೇವೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯ್ತಿಗಳಲ್ಲಿ ಆರಂಭವಾಗಿದ್ದ ಬಾಪೂಜಿ ಸೇವಾ ಕೇಂದ್ರವು ಬಹುತೇಕ ನಿರುಪಯುಕ್ತವಾಗಿದೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 2016 ಜುಲೈನಲ್ಲಿ ಬಾಪೂಜಿ ಸೇವಾ ಕೇಂದ್ರ ಎಂಬ ನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಈ ಕಾರ್ಯಕ್ರಮದನ್ವಯ ಪಹಣಿ ಪತ್ರಿಕೆ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ಸೇರಿದಂತೆ 100 ಸೇವೆಗಳನ್ನು ಕೇಂದ್ರದಲ್ಲಿ ಒದಗಿಸಲಾಗಿದೆ. ಅವುಗಳಲ್ಲಿ 43 ಸೇವೆಗಳು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ್ದಾದರೆ, 40 ಸೇವೆಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ಇನ್ನುಳಿದವು ಮೊಬೈಲ್ ರಿಚಾರ್ಜ್, ವಿಮಾನ, ರೈಲ್ವೆ ಟಿಕೆಟ್ ಬುಕಿಂಗ್‌ನಂತಹ ವಾಣಿಜ್ಯ ಸೇವೆಗಳಾಗಿವೆ ಇವೆ.

‘ಮೂರು ತಿಂಗಳುಗಳಿಂದ ಬಾ‍ಪೂಜಿ ಕೇಂದ್ರದಲ್ಲಿ ಪಹಣಿ ಪತ್ರಿಕೆ ಸಿಗುತ್ತಿಲ್ಲ. 100 ಸೇವೆಗಳನ್ನು ನೀಡುವ ಯೋಜನೆಯ ಕನಸು ಸಾಕಾರಗೊಂಡಿಲ್ಲ. ಈ ಕೇಂದ್ರಕ್ಕೆಂದೇ ಪಂಚಾಯ್ತಿಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜನರ ಅಗತ್ಯಕ್ಕೆ ಪೂರಕವಾಗಿ ಇಂತಹ ಕೇಂದ್ರಗಳು ಕೆಲಸ ಮಾಡಬೇಕು’ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ.

ADVERTISEMENT

ಇಷ್ಟೊಂದು ಸೇವಾ ಸೌಲಭ್ಯವನ್ನು ಇಟ್ಟುಕೊಂಡಿರುವ ಕೇಂದ್ರದಿಂದ ಜನರಿಗೆ ಹೆಚ್ಚು ಅನುಕೂಲವಾಗಿದ್ದು ಪಹಣಿ ಪತ್ರಿಕೆ ಪಡೆಯುವ ವ್ಯವಸ್ಥೆ. ಪ್ರಸ್ತುತ ಈ ಸೌಲಭ್ಯವೂ ಸದ್ಯ ಬಂದ್‌ ಆಗಿದ್ದು, ಹಳ್ಳಿಯ ಜನರು ಮೊದಲಿನಂತೆ, ಪಹಣಿ ಪತ್ರಿಕೆಗಾಗಿ ನಗರದ ನೆಮ್ಮದಿ ಕೇಂದ್ರಕ್ಕೆ ಬಂದು, ಸರದಿಯಲ್ಲಿ ನಿಲ್ಲಬೇಕಾಗಿದೆ.

‘ಪಂಚಾಯ್ತಿಗೆ ಬರುವ ಹೆಚ್ಚಿನ ಅರ್ಜಿಗಳು ಪಹಣಿ ಪತ್ರಿಕೆ, ಜಾತಿ, ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದ್ದವಾಗಿವೆ. ಬಾಪೂಜಿ ಕೇಂದ್ರದ ಮೂಲಕ ಪಹಣಿ, ಇನ್ನಿತರ ಪ್ರಮಾಣಪತ್ರ ನೀಡಲು ‍ಪ್ರ‌ತ್ಯೇಕ ಆನ್‌ಲೈನ್ ಖಾತೆ ಇರಬೇಕು. ನೆಟ್‌ ಬ್ಯಾಂಕಿಂಗ್ ಮಾಡಲು ಪಂಚಾಯ್ತಿಗಳು ಈ ಖಾತೆಯನ್ನು ತೆರೆದಿವೆ. ಆದರೆ, ಆನ್‌ಲೈನ್ ಖಾತೆ ಮೂಲಕ ಪಹಣಿ ಪತ್ರಿಕೆ ತೆಗೆಯಲು ತಾಂತ್ರಿಕ ಸಮಸ್ಯೆ ಎದುರಾಗಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಿಡಿಒ ಒಬ್ಬರು.

’ಪಹಣಿ ಪತ್ರಿಕೆ ಪಡೆಯಲು ರೈತರೊಬ್ಬರು ಬಂದಿದ್ದರು. ₹ 500 ರಿಚಾರ್ಜ್ ಮಾಡಿ, ಪಹಣಿ ಪಡೆಯಲು ಪ್ರಯತ್ನಿಸಿದೆವು. ಖಾತೆಯಲ್ಲಿರುವ ಹಣ ಖಾಲಿಯಾಯಿತೇ ವಿನಾ ಪಹಣಿ ಪತ್ರಿಕೆ ಮುದ್ರಿತಗೊಳ್ಳಲಿಲ್ಲ’ ಎಂದು ಅವರು ಹೇಳಿದರು. ‘ಆರಂಭದಲ್ಲಿ ತಾಲ್ಲೂಕಿನ 10 ಗ್ರಾಮ ಪಂಚಾಯ್ತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಎಲ್ಲ 32 ಪಂಚಾಯ್ತಿಗಳಲ್ಲಿ ಕೇಂದ್ರಗಳು ಇವೆ. ಕಂದಾಯ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇವೆಗಳು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಷ್ಠಾನಗೊಳ್ಳುತ್ತವೆ. ಎರಡು ಇಲಾಖೆಗಳ ನಡುವೆ ಇನಷ್ಟು ಸಮನ್ವಯತೆ ಬರಬೇಕಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಆಜೂರ್ ಪ್ರತಿಕ್ರಿಯಿಸಿದರು.

ಕೇಂದ್ರ ಪ್ರಾರಂಭವಾಗುವ ಹಂತದಲ್ಲಿ ಡಾಟಾ ನೋಂದಣಿಗೆ ಸಿಬ್ಬಂದಿ ನಿಯೋಜಿಸುವ ಭರವಸೆ ಸಿಕ್ಕಿತ್ತು. ಆದರೆ, ಇನ್ನೂ ಸಿಬ್ಬಂದಿ ನೇಮಕವಾಗಿಲ್ಲ. ಪಂಚಾಯ್ತಿಯ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.