ಮುಂಡಗೋಡ: ಉದ್ಯೋಗ ಅರಸಿ ಪಟ್ಟಣಕ್ಕೆ ವಲಸೆ ಹೋದರೂ, ಹಬ್ಬದ ಸಮಯದಲ್ಲಿ ಗೌಳಿವಾಡಾಗಳಿಗೆ ಆಗಮಿಸಿ, ಸಾಂಪ್ರದಾಯಿಕ ಆಚರಣೆಯಲ್ಲಿ ಯುವಕರು ತೊಡಗುವುದು ವಿಶೇಷ.
ದನಗರ ಗೌಳಿ ಜನಾಂಗದವರ ದಸರಾ ಆಚರಣೆ ವಿಶೇಷವಾಗಿರುತ್ತದೆ. ತಾಲ್ಲೂಕಿನ ಕಳಿಕಿಕಾರೆ, ಮೈನಳ್ಳಿ, ಬಡ್ಡಿಗೇರಿ, ಬ್ಯಾನಳ್ಳಿ, ಗೋದ್ನಾಳ, ಜೇನಮುರಿ, ಸಿರಿಗೇರಿ, ನ್ಯಾಸರ್ಗಿ, ಉಗ್ಗಿನಕೇರಿ ಇನ್ನಿತರ ಕಡೆ ವಾಸವಿರುವ ಸಮುದಾಯದವರ ‘ಶಿಲ್ಲೆಂಗಾನ್’ ಆಚರಣೆಗೆ ಹೆಚ್ಚು ಮಹತ್ವವಿದೆ.
ಘಟಸ್ಥಾಪನೆ, ಜಾಗರಣೆ, ಮನೆಯ ಅಂಗಳದಲ್ಲಿ ಗಜಕುಣಿತ, ಸೀಮೋಲ್ಲಂಘನ, ಶಿಲ್ಲೆಂಗಾನ್ ಇವು ಗೌಳಿಗ ಸಮುದಾಯದವರ ದಸರಾ ಆಚರಣೆಯಲ್ಲಿ ಕಂಡುಬರುವ ಪ್ರಮುಖ ಹಂತಗಳು. ಸಮುದಾಯದ ಒಳಪಂಗಡಗಳಾದ ಕೊಕರೆ, ಎಡಗೆ, ತೊರತ್, ಧೂಯಿಪಡೆ, ವರಕ್, ಶಳಕೆ, ಶಿಂಧೆ ಸೇರಿದಂತೆ ಎಲ್ಲರೂ ಒಂದಾಗಿ ದಸರಾ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.
‘ಏಕಾದಶಿ ದಿನದಂದು ನಿಗದಿಪಡಿಸಿರುವ ಗೌಳಿವಾಡಾದಲ್ಲಿ ಶಿಲ್ಲೆಂಗಾನ್ ಆಯೋಜಿಸಲಾಗುತ್ತದೆ. ತಮ್ಮೂರಿನ ಹಬ್ಬಕ್ಕೆ ಬರುವಂತೆ ವಾರದ ಸಂತೆಯಲ್ಲಿ ಶಿಲ್ಲೆಂಗಾನ್ ನಡೆಯುವ ಊರಿನ ಪ್ರಮುಖರು, ಇತರೆ ಗೌಳಿವಾಡಾಗಳ ಜನರಿಗೆ ವೀಳ್ಯದೆಲೆಯ ಆಮಂತ್ರಣ (ಈಡಾ) ನೀಡುತ್ತಾರೆ. ಆಮಂತ್ರಣ ಸ್ವೀಕರಿಸಿದ ಜನರು ತಮ್ಮ ತಮ್ಮ ಗೌಳಿವಾಡಾದಲ್ಲಿರುವ ಜನರಿಗೆ ಶಿಲ್ಲೆಂಗಾನ್ ಆಮಂತ್ರಣದ ಪಡೆದಿರುವುದನ್ನು ತಿಳಿಸುತ್ತಾರೆ. ಆ ಗೌಳಿವಾಡಾದ ಎಲ್ಲ ಸದಸ್ಯರೂ, ಶಿಲ್ಲೆಂಗಾನ್ ನಡೆಯುವ ಗೌಳಿವಾಡಾದತ್ತ ಪಯಣ ಬೆಳೆಸುವುದು ಸಂಪ್ರದಾಯ’ ಎನ್ನುತ್ತಾರೆ ಯುವ ಮುಖಂಡ ಸಿದ್ದು ತೊರವತ್.
‘ಬ್ರಾಹ್ಮಿ ಮುಹೂರ್ತದಲ್ಲಿ ಬರುವ ಗಜಕುಣಿತ ತಂಡಗಳನ್ನು ಗೌಳಿವಾಡಾದಲ್ಲಿ ಅರತಿ ಮಾಡಿ ಸ್ವಾಗತಿಸಲಾಗುತ್ತದೆ. ಮಜ್ಜಿಗೆ ತುಂಬಿರುವ ಮಡಿಕೆಯಲ್ಲಿ ಕಾಯಿ ಇಟ್ಟುಕೊಂಡು, ಮಕ್ಕಳು, ಮಹಿಳೆಯರು ಶಿಲ್ಲೆಂಗಾನ್ ನಡೆಯುವ ಗೌಳಿವಾಡಾಕ್ಕೆ ಹೋಗುತ್ತಾರೆ. ಬೆಳಗಿನ ಜಾವದವರೆಗೂ ಗಜಕುಣಿತ ತಂಡಗಳು ಬರುತ್ತವೆ’ ಎಂದು ವಿವರಿಸಿದರು.
‘ಘಟಸ್ಥಾಪನೆಯ 8ನೇ ದಿನವಾದ ಮಂಗಳವಾರ ಜಾಗರಣೆಗೆ ಚಾಲನೆ ನೀಡಲಾಗುತ್ತಿದೆ. ಮಾರನೇ ದಿನ ಫರಾತಲಾ ಹಾಗೂ ಗುರುವಾರ ಬಾಹಿರಲಾ ದಸರಾ ಆಚರಿಸಲಾಗುತ್ತದೆ. ಫರಾತಲಾ ಎಂದರೆ ಪ್ರತಿ ಗೌಳಿವಾಡಾದಲ್ಲಿರುವ ಯುವಕರು, ಹಿರಿಯರು ಗಜಕುಣಿತದ ತಂಡ ಕಟ್ಟಿಕೊಂಡು ಮನೆಮನೆಗೆ ತೆರಳಿ ನೃತ್ಯ ಮಾಡುತ್ತಾರೆ. ಪ್ರತಿ ಮನೆಯಲ್ಲಿ ಅನ್ನ, ಹಾಲು, ತುಪ್ಪ ಹಾಗೂ ಬೆಲ್ಲದಿಂದ ಮಾಡಿರುವ ವಿಶೇಷ ಖಾದ್ಯವನ್ನು ಗಜತಂಡದ ಸದಸ್ಯರು ಸಹಪಂಕ್ತಿ ಭೋಜನ ಮಾಡುತ್ತಾರೆ. ಇದಾದ ನಂತರ ಗೌಳಿವಾಡಾದ ಅಂಗಳದಲ್ಲಿ ಪ್ರತಿ ಕುಟುಂಬದ ಮಹಿಳೆಯರು ಮಜ್ಜಿಗೆ ತುಂಬಿರುವ ಮಡಕೆಯನ್ನು ತಂದು ಇಡುತ್ತಾರೆ’ ದನಗರ ಗೌಳಿ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂತೋಷ ವರಕ್ ತಿಳಿಸಿದರು.
‘ಗಜಕುಣಿತದ ತಂಡಗಳು ಅಲ್ಲಿ ಗಂಟೆಗಟ್ಟಲೇ ನೃತ್ಯವನ್ನು ಮಾಡುತ್ತಾರೆ. ಇಲ್ಲಿಯೇ ಘಟಸ್ಥಾಪನೆ ಮಾಡಿರುವುದನ್ನು ಇಟ್ಟು ವಿಶೇಷ ಪೂಜೆ ಮಾಡಲಾಗುತ್ತದೆ. ಪೂಜೆ ಮುಗಿದ ನಂತರ ಬೆಸಬೆಡಗು ಪಂಗಡದವರು ಪರಸ್ಪರ ಮಜ್ಜಿಗೆಯನ್ನು ಮೈಮೇಲೆ ಹಾಕಿಕೊಂಡು ಮಜ್ಜಿಗೆ ಸ್ನಾನ ಮಾಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.
ಯಾವುದೇ ತಪ್ಪು ಮಾಡಿದ್ದರೂ ಮಜ್ಜಿಗೆ ಸ್ನಾನದ ಮೂಲಕ ಎಲ್ಲವೂ ಕಳೆಯಲಿ ಎನ್ನುವುದು ಶಿಲ್ಲೆಂಗಾನ್ ಆಚರಣೆಯ ನಂಬಿಕೆಸಂತೋಷ ವರಕ್ ದನಗರ ಗೌಳಿ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.