ADVERTISEMENT

ಲಾರಿಯಿಂದ ಗೂಟದ ಕಾರಿನವರೆಗೆ: ನೂತನ ಸಚಿವ ಶಿವರಾಮ ಹೆಬ್ಬಾರ್ ನಡೆದು ಬಂದ ಹಾದಿ...

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ

ಸಂಧ್ಯಾ ಹೆಗಡೆ
Published 6 ಫೆಬ್ರುವರಿ 2020, 9:09 IST
Last Updated 6 ಫೆಬ್ರುವರಿ 2020, 9:09 IST
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್   

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅವರ ಬಹುದಿನಗಳ ಕನಸು ಸಾಕಾರಗೊಂಡಿದೆ.

ನಾಲ್ಕು ದಶಕಗಳ ಹಿಂದೆ ಲಾರಿ ಚಾಲಕನಾಗಿ ಉದ್ಯಮ ಆರಂಭಿಸಿದ ವ್ಯಕ್ತಿ, ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನವಾಗಿರುವ ಸಚಿವ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಕೃಷಿ ಕುಟುಂಬದ ಶಿವರಾಮ ಹೆಬ್ಬಾರ್ ಜೀವನದಲ್ಲಿ ಅನೇಕ ಸವಾಲು, ಸಂಘರ್ಷಗಳನ್ನು ದಿಟ್ಟತನದಿಂದ ಎದುರಿಸಿದವರು. ಅವರೊಳಗಿನ ಅಚಲ ಆತ್ಮವಿಶ್ವಾಸವೇ ಅವರನ್ನು ಸಚಿವ ಸ್ಥಾನದವರೆಗೆ ಕೊಂಡೊಯ್ದಿದೆ.

ಹೊನ್ನಾವರ ತಾಲ್ಲೂಕು ನವಿಲಗೋಣದ ಕಾವೇರಿ ಮತ್ತು ಮಹಾಬಲೇಶ್ವರ ಹೆಗಡೆ ದಂಪುತಿ ಪುತ್ರ ಹೆಬ್ಬಾರ್ ಅವರು, ಬದುಕಿನ ನೆಲೆ ಕಂಡುಕೊಂಡಿದ್ದು ಯಲ್ಲಾಪುರ ತಾಲ್ಲೂಕಿನಲ್ಲಿ. ಕೃಷಿಯ ಜೊತೆಗೆ ಉದ್ಯಮ ಆರಂಭಿಸಲು ಮುಂದಾದ ಶಿವರಾಮ ಹೆಬ್ಬಾರ್ ಅವರು 1970ರ ದಶಕದಲ್ಲಿ ತಮ್ಮ ಭಾವನ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದರು. ನಂತರ ಸ್ವಂತ ಲಾರಿ ಖರೀದಿಸಿ, ತಾವೇ ಅದರ ಚಾಲಕನಾಗಿ ಕಾರ್ಯ ನಿರ್ವಹಿಸಿದರು.

ADVERTISEMENT

1983ರಲ್ಲಿ ಯಲ್ಲಾಪುರ ಎಪಿಎಂಸಿಗೆ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ಅವರು, ನಂತರ ರಾಜಕೀಯ ಪ್ರವೇಶಿಸಿದರು. ಸಹಕಾರ ಸಂಸ್ಥೆಗಳು, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದರು. ನಾಯಕರ ನಡುವಿನ ಮುನಿಸಿನಿಂದ ಕಮಲ ಬಿಟ್ಟು ಕೈ ಹಿಡಿದ ಹೆಬ್ಬಾರ್, 2008ರಲ್ಲಿ ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ವಿ.ಎಸ್.ಪಾಟೀಲ ವಿರುದ್ಧ ಸೋತರು.

ಚುನಾವಣೆಯಲ್ಲಿ ಸೋತರೂ, ಕ್ಷೇತ್ರ ಸಂಚಾರ, ಜನರೊಡನೆ ಸಂಪರ್ಕ ಉಳಿಸಿಕೊಂಡಿದ್ದ ಅವರು, 2013 ಹಾಗೂ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ರಾಜೀನಾಮೆ ನೀಡಿದ ಹೆಬ್ಬಾರ್, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೆ ಜಯಗಳಿಸಿದರು.

ದೇಶಪಾಂಡೆಗೆ ಸವಾಲು

ಐದು ದಶಕಗಳಲ್ಲಿ ಬಹುತೇಕ ಅವಧಿ ಜಿಲ್ಲೆಯನ್ನಾಳಿದ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರಿಗೆ ಸೆಡ್ಡು ಹೊಡೆದು ರಾಜಕಾರಣ ಮಾಡಿದ ಹೆಬ್ಬಾರ್, 2018ರ ಚುನಾವಣೆ ಗೆದ್ದ ಮೇಲೆ ಬಹಿರಂಗವಾಗಿಯೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದೇಶಪಾಂಡೆ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಪಟ್ಟ ಪಡೆದ ನಂತರ, ಇನ್ನಷ್ಟು ಅಸಮಾಧಾನಗೊಂಡಿದ್ದ ಹೆಬ್ಬಾರ್, ‘ಹಿರಿಯರು ಕಿರಿಯರಿಗೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ಅನೇಕ ಸಭೆಗಳಲ್ಲಿ ಉಚ್ಚರಿಸಿದ್ದರು.

ಈಗ ಹೆಬ್ಬಾರರಿಗೆ ಅದೃಷ್ಟ ಒಲಿದಿದೆ. ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್, ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ, ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದೇಶಪಾಂಡೆ, ಈಗ ಹಳಿಯಾಳ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹೆಬ್ಬಾರರ ಆಸೆ ಕೊನೆಗೂ ಕೈಗೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.